ಧಾರವಾಡ:ಬಜರಂಗದಳದವರು ಹನುಮಾನ್ ಚಾಲೀಸ್ ಮಾಡಲಿ. ನಾವು ನಮ್ಮ ಐದು ಗ್ಯಾರಂಟಿಯ ಚಾಲೀಸ್ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಧಾರವಾಡ ತಾಲೂಕಿನ ಹುಬ್ಬಳ್ಳಿಯಲ್ಲಿ ಗುರುವಾರ ನಡೆದ ಕಾಂಗ್ರೆಸ್ ಬಹಿರಂಗ ಸಭೆಯ ಬಳಿಕ ಅವರು ಮಾತನಾಡಿದರು.
ನಾನು ಧಾರವಾಡ ಕ್ಷೇತ್ರಕ್ಕೆ ದುಃಖದಿಂದ ಬಂದು ಚುನಾವಣಾ ಪ್ರಚಾರ ಮಾಡುತ್ತಿದ್ದೇನೆ. ರಾಜ್ಯದ ಇತಿಹಾಸದಲ್ಲಿಯೇ ಯಾವತ್ತೂ ಇಂತಹ ನೀಚ ರಾಜಕಾರಣ ನಡೆದಿಲ್ಲ ಎಂದು ಇದೇ ವೇಳೆ ಆಕ್ರೋಶ ವ್ಯಕ್ತಪಡಿಸಿದರು. ಪ್ರಜಾಪ್ರಭುತ್ವದಲ್ಲಿ ತೀರ್ಪು ಬರುವವರೆಗೂ ಮತಯಾಚನೆಗೆ ಅವಕಾಶ ಇದೆ. ಆದರೆ ವಿನಯ ಕುಲಕರ್ಣಿಗೆ ಬಿಜೆಪಿ ಶಿಕ್ಷೆ ಕೊಟ್ಟಿದೆ. ಇದಕ್ಕೆ ನಾನು, ವಿನಯ ಕುಲಕರ್ಣಿ ಉತ್ತರ ಕೊಡಬೇಕಿಲ್ಲ. ಜನರೇ ಉತ್ತರ ಕೊಡಬೇಕಿದೆ. ಅವರು ಬೆಳಗಾವಿ ಜೈಲಿನಲ್ಲಿದ್ದಾಗ ನಾನು ಭೇಟಿಯಾಗಬೇಕಿತ್ತು. ಅದಕ್ಕಾಗಿ ಕೋರ್ಟ್ಗೆ ಅರ್ಜಿ ಹಾಕಿದ್ದೆ. ನನ್ನ ಅರ್ಜಿ ತಿರಸ್ಕಾರ ಆಗಿತ್ತು. ನಾನೂ ಸಹ ತಿಹಾರ್ ಜೈಲಿನಲ್ಲಿದ್ದೆ. ಸೋನಿಯಾ ಗಾಂಧಿ ಬಂದು ಭೇಟಿಯಾಗಿ ಧೈರ್ಯ ತುಂಬಿದ್ದರು ಎಂದು ಹಳೆಯ ಘಟನೆಗಳನ್ನು ನೆನೆದರು.
ಕಳೆದ ಚುನಾವಣೆಯಲ್ಲಿ ಯಡಿಯೂರಪ್ಪ ಜೈಲಿಗೆ ಕಳುಹಿಸುವ ಬಗ್ಗೆ ಮಾತಾಡಿದ್ದರು. ಅದರಂತೆ ಅಧಿಕಾರ ದುರುಪಯೋಗ ಮಾಡಿದ್ದಾರೆ. ನೀವು ಇಂತಹ ನೂರು ಕುತಂತ್ರ ಮಾಡಿದರೂ ಏನೂ ಆಗುವುದಿಲ್ಲ. ಕುಲಕರ್ಣಿಯನ್ನು ಸಿಎಂ ವಿರುದ್ಧ ಸ್ಪರ್ಧೆ ಮಾಡಿಸಲು ಬಹಳ ಒತ್ತಡ ಇತ್ತು. ಅಲ್ಲಿ ನಾವು ಅಲ್ಪಸಂಖ್ಯಾತರಿಗೆ ಅವಕಾಶ ಕೊಟ್ಟಿದ್ದೇವೆ. ಕುಲಕರ್ಣಿ ಪ್ರಭಾವ, ಪ್ರವಾಹದ ಮುಂದೆ ಸಿಎಂ ಸಹ ಗೆಲ್ಲಲು ಆಗುವುದಿಲ್ಲ ಎಂದರು.