ಹುಬ್ಬಳ್ಳಿ:ಸಿಎಂ ನಾನು ಆಗೋದಲ್ಲ, ಯಾರು ಆಗಬೇಕು ಅನ್ನೋದು ಹೈಕಮಾಂಡ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್, ಸೋನಿಯಾ ಗಾಂಧಿ ತೀರ್ಮಾನ ಮಾಡ್ತಾರೆ. ಹೈಕಮಾಂಡ್ ಏನ್ ಹೇಳುತ್ತೋ ಅದೇ ನನ್ನ ಪ್ರಸಾದ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಹೇಳಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರದಲ್ಲಿ ಬಿಜೆಪಿಯವರದ್ದು ಸುಳ್ಳಿನ ಯುನಿವರ್ಸಿಟಿ. ಮೂರು ವರ್ಷದಿಂದ ಒಂದೇ ಒಂದು ಯೋಜನೆ ಜಾರಿಗೊಳಿಸಲು ಆಗಿಲ್ಲ. ಮೂರು ರಾಜ್ಯಗಳಲ್ಲಿ ಅವರದ್ದೇ ಸರ್ಕಾರಗಳಿವೆ. ಆದರೂ ಯೋಜನೆ ಜಾರಿ ಮಾಡಲು ಆಗಿಲ್ಲ. ಈಗ ನಾವು, ರೈತರು ಸೇರಿ ಹೋರಾಟ ಮಾಡಿ ಒಂದು ಹಂತಕ್ಕೆ ತಂದಿದ್ದೇವೆ. ಕಳಸಾ ಬಂಡೂರಿ ಯೋಜನೆ ರದ್ದುಗೊಳಿಸದಿದ್ದರೆ ಗೋವಾ ಸಚಿವರೊಬ್ಬರು ರಾಜೀನಾಮೆ ಕೊಡ್ತಾರಂತೆ. ಕೊಡಲಿ ಬಿಡಿ. ರಾಜ್ಯದಲ್ಲಿ 26 ಸಂಸದರು ಬಿಜೆಪಿಯವರಿದ್ದಾರೆ.
ಸುಮಲತಾ ಕೂಡ ಬಿಜೆಪಿ ಅಸೋಸಿಯೇಟ್ ಮೆಂಬರ್. ಮಹದಾಯಿಗಾಗಿ ಇವರು ಒಮ್ಮೆಯೂ ಪ್ರಧಾನಿ ಬಳಿ ಮಾತನಾಡಿಲ್ಲ. ನೀರು ಹರಿಸುವ ಮುನ್ನ ಕಾಮಗಾರಿಯಾದ್ರೂ ಪೂರ್ಣಗೊಳಿಸಬೇಕಿತ್ತು. ಪ್ರಹ್ಲಾದ್ ಜೋಶಿ ಎಷ್ಟೊಂದು ಅಪ್ಡೇಟ್ ಇದ್ದಾರೆ ಅನ್ನೋದು, ಪತ್ರ ಓದಲಿ ಗೊತ್ತಾಗುತ್ತೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಪತ್ರದಲ್ಲಿ ಕಂಡಿಷನ್ ಹಾಕಿದ್ದಾರೆ. ನಮಗೆ ಅಧಿಕಾರ ಸಿಕ್ಕರೆ ಆರು ತಿಂಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೇವೆ ಎಂದು ಇದೇ ವೇಳೆ ಡಿ ಕೆ ಶಿವಕುಮಾರ್ ಜನರಿಗೆ ಭರವಸೆ ನೀಡಿದರು.
ಕಾಂಗ್ರೆಸ್ನಲ್ಲಿ ನೋ ಫಿಕ್ಸಿಂಗ್: ನನ್ನ ಅಧ್ಯಕ್ಷತೆಯಲ್ಲಿ ಒಳ ಒಪ್ಪಂದಕ್ಕೆ ಅವಕಾಶ ನೀಡಲ್ಲ. ಕಾಂಗ್ರೆಸ್ ಮೊದಲ ಪಟ್ಟಿ ಬಹುತೇಕ ಸಿದ್ಧಗೊಂಡಿದೆ. ಟಿಕೆಟ್ಗಾಗಿ ಪಕ್ಷದಲ್ಲಿ ಯಾವುದೇ ಕಿತ್ತಾಟ ನಡೆದಿಲ್ಲ. ಜಗದೀಶ್ ಶೆಟ್ಟರ್ ಸೇರಿ ಬಿಜೆಪಿ ನಾಯಕರ ಕ್ಷೇತ್ರಗಳಲ್ಲಿಯೂ ಪೈಪೋಟಿ ನಡೆದಿದೆ. ಕಾಂಗ್ರೆಸ್ ಪಕ್ಷದಲ್ಲಿ ನೋ ಮ್ಯಾಚ್ ಫಿಕ್ಸಿಂಗ್. ಬೇರೆ ಪಕ್ಷದಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯಬಹುದು. ಕಾಂಗ್ರೆಸ್ ಪಕ್ಷದಲ್ಲಿ ಮ್ಯಾಚ್ ಫಿಕ್ಸಿಂಗ್ಗೆ ಅವಕಾಶ ನೀಡಲ್ಲ. ಕಾಂಗ್ರೆಸ್ ನಾಯಕರನ್ನು ಸೋಲಿಸಲು ಕಾಂಗ್ರೆಸ್ ನಾಯಕರಂದಲೇ ಫಿಕ್ಸಿಂಗ್ ವಿಚಾರ ಮಾಧ್ಯಮಗಳ ಸೃಷ್ಟಿ. ಹಾಲಿ ಶಾಸಕರಲ್ಲಿ ಶೇ.95 ರಷ್ಟು ಜನರಿಗೆ ಟಿಕೆಟ್ ಸಿಗೋದು ಖಚಿತ ಎಂದು ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದರು.