ಹುಬ್ಬಳ್ಳಿ : ನಗರದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಆರಂಭಗೊಂಡಿದ್ದ ಪ್ರೀ- ಪೇಯ್ಡ್ ಆಟೋ ಸೇವೆ ಜನರಿಗೆ ತಲುಪುವ ಮುನ್ನವೇ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. ಪ್ರಾದೇಶಿಕ ಸಾರಿಗೆ ಇಲಾಖೆ ಮತ್ತು ಆಟೋ ಚಾಲಕರ ಬೆಂಬಲದ ಕೊರತೆಯಿಂದಾಗಿ ಯೋಜನೆ ಸ್ಥಗಿತಗೊಳ್ಳುವ ಹಂತಕ್ಕೆ ಬಂದು ತಲುಪಿದೆ.
ಜನವರಿ 31ರೊಳಗೆ ಆಟೋ ಸೇವೆ ಸ್ಥಗಿತ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮಿ ರೈಲು ನಿಲ್ದಾಣದ ಮುಂಭಾಗದಲ್ಲಿ ಕಳೆದ ಒಂದೂವರೆ ತಿಂಗಳ ಹಿಂದೆಯಷ್ಟೇ ಪ್ರಿ–ಪೇಯ್ಡ್ ಆಟೋ ಸೇವೆಯನ್ನು ಆರಂಭಿಸಲಾಗಿತ್ತು. ಬೆಂಗಳೂರು ಮೂಲದ ಪಾಟ್ಸ್ ಸಂಸ್ಥೆ ಡಿ.3 ರಂದು ರೈಲ್ವೆ ನಿಲ್ದಾಣದ ಎದುರು 24X7 ಪ್ರಿ-ಪೇಯ್ಡ್ ಆಟೋ ಸೇವೆಯನ್ನು ಆರಂಭಿಸಿತ್ತು. ಆದರೆ ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ರೈಲ್ವೆ ಪೊಲೀಸ್ ಮತ್ತು ಆಟೋ ಚಾಲಕರ ಸಹಕಾರದ ಕೊರತೆಯಿಂದಾಗಿ ಯೋಜನೆ ಸ್ಥಗಿತಗೊಳ್ಳುವಂತಾಗಿದೆ. ಈ ಬಗ್ಗೆ ಪ್ರಿ–ಪೇಯ್ಡ್ ಆಟೋ ಆ್ಯಂಡ್ ಟ್ಯಾಕ್ಸಿ ಸರ್ವಿಸ್ (ಪಾಟ್ಸ್) ಸಂಸ್ಥೆ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರಿಗೆ ಸೋಮವಾರ ಪತ್ರ ಬರೆದಿದ್ದು, ಜ.31ರೊಳಗೆ ಸೇವೆ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.
ಪಾಟ್ ಸಂಸ್ಥೆಗೆ ದೊರಕದ ಸಹಕಾರ: ಇನ್ನು ಸಂಸ್ಥೆಯಡಿ ನೋಂದಾಯಿಸಿಕೊಳ್ಳದ ಆಟೋ ಚಾಲಕರು ರೈಲು ಇಳಿದ ಪ್ರಯಾಣಿಕರನ್ನು ಮನಸೋ ಇಚ್ಛೆ ಬಾಡಿಗೆ ದರದಲ್ಲಿ ಕರೆದೊಯ್ಯುತ್ತಿದ್ದರು. ಇದನ್ನು ತಪ್ಪಿಸುವಂತೆ ಪಾಟ್ ಸಂಸ್ಥೆಯು ಪೊಲೀಸ್ ಮತ್ತು ಸಾರಿಗೆ ಇಲಾಖೆಗೆ ನಾಲ್ಕೈದು ಬಾರಿ ವಿನಂತಿಸಿಕೊಂಡಿತ್ತು. ಆದರೆ ಈ ಬಗ್ಗೆ ಇಬ್ಬರೂ ಸಕಾರಾತ್ಮಕವಾಗಿ ಸ್ಪಂದಿಸದ ಕಾರಣ ತಮ್ಮ ಸೇವೆಯಿಂದ ಹಿಂದೆ ಸರಿಯುವ ತೀರ್ಮಾನಕ್ಕೆ ಸಂಸ್ಥೆ ಬಂದಿದೆ.