ಕರ್ನಾಟಕ

karnataka

ETV Bharat / state

ನಿರಂತರ ಮಳೆಗೆ ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲಾ ಕಟ್ಟಡ: ಆತಂಕದಲ್ಲಿ ಮಕ್ಕಳು - ಈಟಿವಿ ಭಾರತ ಕನ್ನಡ

ನಿರಂತರ ಸುರಿದ ಮಳೆಗೆ ಹಳೆಯ ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆಗೆ ತಲುಪಿದ್ದು, ಅದರಲ್ಲೇ ಕುಳಿತು ಮಕ್ಕಳು ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲಾ ಕಟ್ಟಡ
ಶಿಥಿಲಾವಸ್ಥೆಗೆ ತಲುಪಿದ ಸರ್ಕಾರಿ ಶಾಲಾ ಕಟ್ಟಡ

By

Published : Aug 3, 2023, 11:35 AM IST

Updated : Aug 3, 2023, 2:59 PM IST

ಶಿಥಿಲಾವಸ್ಥೆಗೆ ತಲುಪದ ಸರ್ಕಾರಿ ಶಾಲಾ ಕಟ್ಟಡ

ಧಾರವಾಡ: ಕಳೆದ ವಾರ ಸುರಿದ ಮಳೆಗೆ ವಿದ್ಯಾಕಾಶಿಯಲ್ಲಿ ಸಾಕಷ್ಟು ಸ್ಕೂಲ್ ಕಟ್ಟಡಗಳು ಶಿಥಿಲಗೊಂಡಿವೆ. ಮಕ್ಕಳು ಕುಳಿತು ಪಾಠ ಕೇಳಲಾಗದ ಸ್ಥಿತಿಯಲ್ಲಿ ಸಹ ಕೆಲವು ಶಾಲೆಗಳಲ್ಲಿ ತರಗತಿ ನಡೆಸಲಾಗುತ್ತಿದೆ.

ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಬರೋಬ್ಬರಿ 492 ಕೊಠಡಿಗಳು ಶಿಥಿಲಾವಸ್ಥೆ ತಲುಪಿವೆ. ಅವುಗಳ ದುರಸ್ತಿಗಾಗಿ ಡಿಸೆಂಬರ್‌ನಲ್ಲಿ ಟೆಂಡರ್ ಕರೆಯಲಾಗಿದ್ದು, ಇಂದಿಗೂ ಕೂಡ ಶಾಲಾ ಕೊಠಡಿಗಳು ಮರು ನಿರ್ಮಾಣಗೊಂಡಿಲ್ಲ. ಈ 492 ಕೊಠಡಿಗಳನ್ನು ಕೆಡವಿ ಮರು ನಿರ್ಮಾಣ ಮಾಡಬೇಕಿದೆ. ಅದರಂತೆ 1,105 ಶಾಲಾ ಕೊಠಡಿಗಳಲ್ಲಿ ಸಣ್ಣ ಪುಟ್ಟ ದುರಸ್ತಿ ಕೆಲಸಗಳಿದ್ದು, ಆ ಕೆಲಸ ಆಗಬೇಕಿದೆ. ಸದ್ಯ ಧಾರವಾಡ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸುರಿದ ಮಳೆಯಿಂದಾಗಿ ಮತ್ತಷ್ಟು ಶಾಲಾ ಕೊಠಡಿಗಳು ಸೋರುತ್ತಿವೆ. ಅಲ್ಲಲ್ಲಿ ಶಾಲಾ ಗೋಡೆ ಸಹ ಕುಸಿದು ಬಿದ್ದಿವೆ.

ಅಳ್ನಾವರದಲ್ಲಿ 20, ಧಾರವಾಡ ಶಹರದಲ್ಲಿ 31, ಧಾರವಾಡ ಗ್ರಾಮೀಣದಲ್ಲಿ 79, ಹುಬ್ಬಳ್ಳಿ ಶಹರದಲ್ಲಿ 48, ಹುಬ್ಬಳ್ಳಿ ಗ್ರಾಮೀಣದಲ್ಲಿ 47, ಕಲಘಟಗಿಯಲ್ಲಿ 75, ಕುಂದಗೋಳದಲ್ಲಿ 82, ನವಲಗುಂದದಲ್ಲಿ 66, ಅಣ್ಣಿಗೇರಿಯಲ್ಲಿ 44 ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಅವುಗಳನ್ನು ಮರು ನಿರ್ಮಾಣ ಮಾಡಬೇಕಿದೆ. ಸದ್ಯ ಈ ಕಟ್ಟಡ ಕಾಮಗಾರಿ ಬಗ್ಗೆ ಲೋಕೋಪಯೋಗಿ ಇಲಾಖೆಗೆ ಪ್ರಸ್ತಾವನೆ ಕೂಡಾ ಕಳುಹಿಸಲಾಗಿದೆ.‌

ಈಗ ಅಲ್ಲಿಂದ ಟೆಂಡರ್ ಆಗಿ ಇದಕ್ಕೆ ಅನುಮತಿ ಸಿಕ್ಕ ಮೇಲೆ ದುರಸ್ತಿ ಹಾಗೂ ನೂತನ ಕಟ್ಟಡ ಕಾರ್ಯಾರಂಭವಾಗಬೇಕಿದೆ.‌ ಸದ್ಯ ಜಿಲ್ಲೆಯಲ್ಲಿ ಅಳ್ನಾವರ ಭಾಗ ಸೇರಿ ಧಾರವಾಡ ಗ್ರಾಮೀಣ ಹಾಗೂ ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿಯೇ ಅತಿಯಾದ ಮಳೆಯಾಗಿದ್ದು, ಹೆಚ್ಚು ಶಾಲೆಗಳಿಗೆ ಹಾನಿ ಉಂಟಾಗಿದೆ. ಆದರೆ, ಮಕ್ಕಳಿಗೆ ಈಗ ದುರಸ್ತಿ ಇರುವ ಕಟ್ಟಡದಲ್ಲಿ ಕುಳಿತುಕೊಳ್ಳುವುದು ಕೂಡ ದೊಡ್ಡ ಸಮಸ್ಯೆಯಾಗಿದೆ. ಏಕೆಂದರೆ ಮಳೆಯಿಂದ ಈಗಾಗಲೇ ಶಾಲೆಯ ಕೊಠಡಿಗಳು ನೆನೆದು ಹೋಗಿದ್ದು, ಶಾಲೆ ಆರಂಭ ಇದ್ದಾಗ ಬಿದ್ದರೆ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

ಸದ್ಯ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸಹ‌ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ. ಶೀಘ್ರದಲ್ಲೇ ಶಾಲೆಗಳ ರಿಪೇರಿ ಕಾರ್ಯ ಆರಂಭವಾಗಲಿದೆ. ಈ ಬಗ್ಗೆ ಅಧಿಕಾರಿಗಳ ಸಭೆ ಕೂಡಾ ಮಾಡಿರುವ ಬಗ್ಗೆ ತಿಳಿಸಿದ್ದಾರೆ.

ಈ ಬಗ್ಗೆ ಡಿಡಿಪಿಐ ಎಸ್ ಎಸ್.ಕೆಳದಿಮಠ ಪ್ರತಿಕ್ರಿಯೆ ನೀಡಿ, 346 ಶಾಲೆಗಳಲ್ಲಿ 11,05 ಕೊಠಡಿಗಳು ರಿಪೇರಿಗೆ ಇವೆ ಎಂದು ಮಾಹಿತಿ ಕಲೆಹಾಕಲಾಗಿದೆ. ಅದರಲ್ಲಿ 492 ಕೊಠಡಿಗಳು ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳಾಗಿವೆ. ಈ ವರದಿಯನ್ನು ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಕಳುಹಿಸಲಾಗಿದೆ. ಹಾಗೆ ಬಳಕೆಗೆ ಯೋಗ್ಯವಾಗಿರುವ ಕೊಠಡಿಗಳ ವರದಿ ನೀಡವಂತೆಯೂ ಸೂಚಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ:ಆತಂಕದಲ್ಲಿ ಮಕ್ಕಳ ಶಿಕ್ಷಣ; ಸರ್ಕಾರಿ ಶಾಲೆಗಳ ಗೋಳು ಕೇಳೋರು ಯಾರು..?

Last Updated : Aug 3, 2023, 2:59 PM IST

ABOUT THE AUTHOR

...view details