ಚಿಟಗುಪ್ಪಿ ಆಸ್ಪತ್ರೆ ವೈದ್ಯರ ಸಾಧನೆ : ಮೂವರು ಮಹಿಳೆಯರಿಗೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಶ್ರೀಧರ ದಂಡೆಪ್ಪನವರ ಹುಬ್ಬಳ್ಳಿ : ಉತ್ತರ ಕರ್ನಾಟಕದ ಬಡವರ ಪಾಲಿನ ಸಂಜೀವಿನಿ ಎಂದು ಕಿಮ್ಸ್ ಆಸ್ಪತ್ರೆಯನ್ನು ಕರೆಯುತ್ತೇವೆ. ಅದೇ ರೀತಿ ಹುಬ್ಬಳ್ಳಿ ಜನತೆಗೆ ಹಾಗೂ ಅಕ್ಕಪಕ್ಕದ ಊರಿನ ಜನರಿಗೆ ಜಿಲ್ಲೆಯ ಚಿಟಗುಪ್ಪಿ ಆಸ್ಪತ್ರೆಯು ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ. ಇಲ್ಲಿ ಮಹಿಳೆಯರಿಗೆ ಸುರಕ್ಷಿತ ಹೆರಿಗೆ ಹಾಗೂ ಸಂತಾನಹರಣ ಶಸ್ತ್ರ ಚಿಕಿತ್ಸೆ ಸೇರಿ ವಿವಿಧ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಇಲ್ಲಿನ ವೈದ್ಯರು ಮೂವರು ಮಹಿಳೆಯರಿಗೆ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮರು ಜೀವ ನೀಡಿದ್ದಾರೆ.
ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಮೂವರು ಮಹಿಳೆಯರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಒಬ್ಬ ಮಹಿಳೆ ಒಂಬತ್ತು ತಿಂಗಳು ಗರ್ಭಿಣಿಯಾಗಿದ್ದಾಗಲೇ ಗರ್ಭ ಚೀಲ ಹರಿದು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು. ಈ ಮಹಿಳೆ ಚಿಟಗುಪ್ಪಿ ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಪರೀಕ್ಷೆ ನಡೆಸಿದ ಬಳಿಕ ಡಾ. ಶ್ರೀಧರ ದಂಡೆಪ್ಪನವರ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ. ಈಗ ತಾಯಿ ಮತ್ತು ಮಗು ಸುರಕ್ಷಿತವಾಗಿದ್ದಾರೆ.
ಅದೇ ರೀತಿ ಇನೋರ್ವ ಮಹಿಳೆಗೆ ಲಾರ್ಜ್ ಓರಿಯನ್ ಟ್ಯೂಮರ್ ಅಂದ್ರೆ ಅಂಡಾಶಯದ ಕ್ಯಾನ್ಸರ್ ಗಡ್ಡೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾದ ಮಹಿಳೆಯನ್ನು ಪರೀಕ್ಷಿಸಿದಾಗ ಅಂಡಾಶಯದಲ್ಲಿ ಗಡ್ಡೆ ಇರುವುದು ಪತ್ತೆಯಾಗಿತ್ತು. ಬಳಿಕ ಮಹಿಳೆಗೆ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಮಹಿಳೆಗೆ ಮರು ಜೀವ ನಡೆಸಿದ್ದಾರೆ. ಮತ್ತೋರ್ವ ಮಹಿಳೆಗೆ ಲ್ಯಾಪರೋಸ್ಕೋಪಿಕ್ ಅಂದ್ರೆ ಉದರ ದರ್ಶಕದಿಂದ ಬಳಲುತ್ತಿದ್ದರು. ಇವರಿಗೂ ಡಾ. ಶ್ರೀಧರ ದಂಡೆಪ್ಪನವರ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ. ಈ ಮೂಲಕ ಮೂವರು ಮಹಿಳೆಯರಿಗೆ ಮರುಜೀವ ನೀಡಿದ್ದಾರೆ.
ಯಶಸ್ವಿ ಶಸ್ತ್ರಚಿಕಿತ್ಸೆ ಬಗ್ಗೆ ವೈದ್ಯಾಧಿಕಾರಿ ಹೇಳಿದ್ದಿಷ್ಟು:ಈ ಬಗ್ಗೆ ಪ್ರತಿಕ್ರಿಯಿಸಿದ ಚಿಟಗುಪ್ಪಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ, ’’ನಮ್ಮ ಆಸ್ಪತ್ರೆ ಸತತ ಎರಡು ವರ್ಷಗಳಿಂದ ವಿಭಿನ್ನ ಪ್ರಕರಣಗಳಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಪ್ರಮುಖವಾಗಿ ನಮ್ಮ ಆಸ್ಪತ್ರೆಯಲ್ಲಿ ಲ್ಯಾಪರೋಸ್ಕೋಪಿ ತಂತ್ರಜ್ಞಾನ ಬಳಸಿ ಸರ್ಜರಿ ಮಾಡಲಾಗುತ್ತಿದ್ದು, ಈಗಾಗಲೇ ಸಾಕಷ್ಟು ಮಹಿಳೆಯರಿಗೆ ವಿವಿಧ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಈ ತಂತ್ರಜ್ಞಾನ ಮೂಲಕ ಜನರಿಗೆ ಶಸ್ತ್ರಚಿಕಿತ್ಸೆ ಹಾಗೂ ಕ್ಯಾನ್ಸರ್ಗೆ ಚಿಕಿತ್ಸೆ ನೀಡಲಾಗುತ್ತಿದೆ. ನಮ್ಮಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿ ಚಿಕಿತ್ಸೆ ನೀಡಲಾಗುತ್ತಿದ್ದು, ರೋಗಿಗಳು ಇದರ ಲಾಭ ಪಡೆಯಬೇಕು‘‘ ಎಂದು ವೈದ್ಯರು ಮನವಿ ಮಾಡಿದರು.
ಇದನ್ನೂ ಓದಿ :ಬೆಳಗಾವಿ: ಸ್ವಾತಂತ್ರ್ಯ ಯೋಧರ ಕುಟುಂಬಗಳ ವಂಶಸ್ಥರಿಗೆ ಗೌರವಧನಕ್ಕೆ ಆಗ್ರಹಿಸಿ ಧರಣಿ