ಕರ್ನಾಟಕ

karnataka

ETV Bharat / state

ಧಾರವಾಡ ಏಳು ವಿಧಾನಸಭೆ ಕ್ಷೇತ್ರ, ಠೇವಣಿ ಕಳೆದುಕೊಂಡ 80ರಷ್ಟು ಅಭ್ಯರ್ಥಿಗಳಿಗೆ ನೋಟಾಗಿಂತಲೂ ಕಡಿಮೆ ಮತ..

ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಪೈಕಿ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ ಬಿದ್ದರೆ ಉಳಿದ 3 ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ.

nota
ನೋಟಾ

By

Published : May 18, 2023, 8:30 PM IST

ಹುಬ್ಬಳ್ಳಿ:ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ವಿಧಾನಸಭಾ ಚುನಾವಣೆ ಬಹುತೇಕ ಪೂರ್ಣಗೊಂಡಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ‌ಕೆ ಶಿವಕುಮಾರ ಪ್ರಮಾಣ ವಚನಕ್ಕೆ ದಿನಗಣನೆ ಆರಂಭವಾಗಿದೆ.ಸಚಿವ ಸಂಪುಟದ ವಿಸ್ತರಣೆಯೊಂದೇ ಬಾಕಿ ಉಳಿದಿದೆ. ಇದರ ಮಧ್ಯೆ ಈಗ ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಗಮನಾರ್ಹ ವಿಷಯವೊಂದು ಬೆಳಕಿಗೆ ಬಂದಿದೆ. ಅಭ್ಯರ್ಥಿಗಳಲ್ಲಿ ಶೇ 80ರಷ್ಟು ಜನರು ತಮ್ಮ ಠೇವಣಿ ಕಳೆದುಕೊಂಡಿರುವುದು ಗಮನ ಸೆಳೆದಿದೆ.

ಜನಪ್ರತಿನಿಧಿಯಾಗಬೇಕೆಂಬ ಉದ್ದೇಶದಿಂದ ಧಾರವಾಡ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ ಶೇ.80 ಕಳೆದುಕೊಂಡಿದ್ದು, ಅಭ್ಯರ್ಥಿಗಳು ನೋಟಾಗಿಂತಲೂ ಕಡಿಮೆ ಮತಗಳನ್ನು ಪಡೆದಿರುವುದು ಗಮನಾರ್ಹ ಸಂಗತಿ. ನೋಟಾ ಮತಗಳು ಬಹಳಷ್ಟು ಅಭ್ಯರ್ಥಿಗಳ ಠೇವಣಿ ನಷ್ಟವಾಗುವಂತೆ ಮಾಡಿವೆ. ನೋಟಾ ಕಾಟ ತೀವ್ರವಾಗಿ ಬಾಧಿಸಿದೆ. ಈ ನಿಟ್ಟಿನಲ್ಲಿ ಅಭ್ಯರ್ಥಿಗಳಿಗೆ ಆಶಾಭಾವನೆಗಿಂತ ನಿರಾಸೆ ಭಾವವನ್ನು ಹುಟ್ಟು ಹಾಕಿದೆ.

ಇನ್ನೂ ವಿಧಾನಸಭಾ ಚುನಾವಣೆ ಕಣದಲ್ಲಿ ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಾದ ನವಲಗುಂದ, ಕುಂದಗೋಳ, ಕಲಘಟಗಿ, ಧಾರವಾಡ ಗ್ರಾಮೀಣ, ಹು-ಧಾ ಪೂರ್ವ, ಹು- ಧಾ ಪಶ್ಚಿಮ ಹಾಗೂ ಹು- ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಅಂತಿಮವಾಗಿ ಒಟ್ಟು 92 ಅಭ್ಯರ್ಥಿಗಳು ಉಳಿದಿದ್ದರು. ಈ ಪೈಕಿ ಬರೋಬ್ಬರಿ 77 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಕ್ಷೇತ್ರದಲ್ಲಿ ಮಾನ್ಯವಾದ ಒಟ್ಟು ಮತಗಳಲ್ಲಿ ಆರನೇ ಒಂದು ಭಾಗ (ಶೇ. 16.66) ಮತಗಳನ್ನು ಪಡೆದ ಅಭ್ಯರ್ಥಿಯ ಠೇವಣಿ ಉಳಿಯುತ್ತದೆ. ಸಾಮಾನ್ಯ ಕ್ಷೇತ್ರದಲ್ಲಿ ಅಭ್ಯರ್ಥಿಗೆ 10 ಸಾವಿರ ರೂ. ಠೇವಣಿ ಇದ್ದರೆ, ಮೀಸಲು ಕ್ಷೇತ್ರದಲ್ಲಿ 5 ಸಾವಿರ ರೂ. ಠೇವಣಿ ಕಟ್ಟಬೇಕು. ಈ ರೀತಿ ಕಟ್ಟಿದ ಠೇವಣಿ ಹಣವು ಶೇ. 16.66 ರಷ್ಟು ಮತ ತೆಗೆದುಕೊಂಡವರಿಗೆ ಮಾತ್ರ ವಾಪಸ್​ ನೀಡಲಾಗುವುದು. ಇಲ್ಲದಿದ್ದರೆ ಚುನಾವಣಾ ಆಯೋಗಕ್ಕೆ ಜಮೆಯಾಗುತ್ತದೆ. ಈ ನಿಟ್ಟಿನಲ್ಲಿ ಶೇ 80ರಷ್ಟು ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದು, ಬಹುತೇಕರು ನೋಟಾಗಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.

ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಜಯ ಸಾಧಿಸಿದವರು:ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಪೈಕಿ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ ಬಿದ್ದರೆ ಉಳಿದ 3 ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಹು-ಧಾ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ವಿರುದ್ಧ ಸೋಲು ಅನುಭವಿಸಿದ್ದಾರೆ.

ನವಲಗುಂದ ಬಿಜೆಪಿ ಅಭ್ಯರ್ಥಿ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಕೋನರಡ್ಡಿ ಭಾರಿ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮತ್ತೆ ಶಾಸಕರಾಗಿ ಆಯ್ಕೆಯಾದರೆ, ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಲಾಡ್-ಛಬ್ಬಿ ಪೈಪೋಟಿಯ ನಡುವೆ ಕೈ ಅಭ್ಯರ್ಥಿ ಸಂತೋಷ ಲಾಡ್ ಜಯಭೇರಿ ಬಾರಿಸಿದ್ದಾರೆ.

ಹು-ಧಾ ಪೂರ್ವ ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದರು. ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣ ಅವರ ಹಿಂದೆ ಘಟಾನುಟಿಗಳೇ ಮತಬೇಟೆ ಮಾಡಿದರೂ ಪ್ರಯೋಜನವಾಗಿಲ್ಲ. ಧಾರವಾಡ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ವಿನಯ ಕುಲಕರ್ಣಿ ಧಾರವಾಡ ಕ್ಷೇತ್ರ ಪ್ರವೇಶಿಸದೇ ಗೆದ್ದು ಹೊಸ ದಾಖಲೆ ಬರೆದರು. ಇತ್ತ ತೊಡೆ ತಟ್ಟಿ ಸವಾಲು ಹಾಕಿದ್ದ ಬಿಜೆಪಿ ಅಭ್ಯರ್ಥಿ ಅಮೃತ್ ದೇಸಾಯಿ ಸೋಲು ಅನುಭವಿಸಿದ್ದಾರೆ.

ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ತಮ್ಮದೇ ಪಾರುಪತ್ಯ ಹೊಂದಿರುವ ಬಿಜೆಪಿ ಅಭ್ಯರ್ಥಿ ಅರವಿಂದ್ ಬೆಲ್ಲದ್ ಮತ್ತೊಮ್ಮೆ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಆರ್.ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ವಿರುದ್ಧ ಜಯ ಸಾಧಿಸಿದ್ದಾರೆ.

ಇದನ್ನೂಓದಿ:ಕಾಂಗ್ರೆಸ್ ಸರ್ಕಾರದಲ್ಲಿ ಜಗದೀಶ್​ ಶೆಟ್ಟರ್​ಗೆ ಸಚಿವ ಸ್ಥಾನ ಖಚಿತ: ಶಾಮನೂರು ಭವಿಷ್ಯ

ABOUT THE AUTHOR

...view details