ಧಾರವಾಡ:ಮಾಜಿ ಸಚಿವ ವಿನಯ ಕುಲಕರ್ಣಿ ಪರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಧಾರವಾಡ ಗ್ರಾಮೀಣ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆ ಮಾಡಿದರು. ಧಾರವಾಡ ಮುರುಘಾಮಠದಿಂದ ಅಪಾರ ಕಾರ್ಯಕರ್ತರೊಂದಿಗೆ ರೋಡ್ ಶೋ ನಡೆಸಿ ಉಪವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಶಿವಲೀಲಾ, ವಿನಯ ಕುಲಕರ್ಣಿ ನಾಮಪತ್ರ ಸಲ್ಲಿಕೆಯನ್ನು ಇವತ್ತು ಅವರ ಅನುಪಸ್ಥಿತಿಯಲ್ಲಿ ಮಾಡಿದ್ದೇವೆ. ಜನರ ಬೆಂಬಲವೂ ದೊಡ್ಡ ಪ್ರಮಾಣದಲ್ಲಿ ಸಿಗುತ್ತಿದೆ. ವಿನಯ ಕುಲಕರ್ಣಿ ಜಿಲ್ಲೆಗೆ ಬರ್ತಾರೆ ಎಂಬ ವಿಶ್ವಾಸವಿತ್ತು. ಕಾನೂನು ಮೇಲೆ ಬಹಳ ವಿಶ್ವಾಸವಿದೆ. ಆದರೆ ನಮಗೆ ಹಿನ್ನಡೆಯಾಗಿದೆ. ನಾವು ಈಗಲೂ ಕಾನೂನು ಮೇಲೆ ಭರವಸೆ ಇಟ್ಟಿದ್ದೇವೆ, ಮುಂದೆ ಅವರು ಜಿಲ್ಲೆಗೆ ಬರದೇ ಇದ್ದರೂ ಜನರು ನಮ್ಮ ಬೆಂಬಲಕ್ಕೆ ಇದ್ದಾರೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.
ನಮ್ಮ ಕ್ಷೇತ್ರದ ಜನರನ್ನು ಕರೆದುಕೊಂಡು ಮತಯಾಚನೆ ಮಾಡ್ತೇನೆ. ಪ್ರತಿ ಮನೆ ಮನೆಗೆ ಹೋಗಿ ಮತ ಕೇಳ್ತೇನೆ. ನಮ್ಮ ಮನೆಯವರನ್ನು ಹತ್ತಿಕ್ಕಲು ಪ್ರಯತ್ನ ನಡೆದಿದೆ. 10 ವರ್ಷಗಳಿಂದ ಈ ಕೆಲಸ ನಡೆದಿದೆ. ಕ್ಷೇತ್ರದಲ್ಲಿ ಯಾವುದೇ ಸಣ್ಣ ಘಟನೆ ನಡೆದರೂ ಅದು ವಿನಯ ಕುಲಕರ್ಣಿ ಹಣೆಪಟ್ಟಿಗೆ ಹಚ್ಚುವ ಕೆಲಸ ನಡೆದಿದೆ ಎಂದರು.
ಇದಕ್ಕೆಲ್ಲ ಉತ್ತರ ಮುಂದಿನ ದಿನಗಳಲ್ಲಿ ಜನ ಕೊಡ್ತಾರೆ. ಸತತವಾಗಿ ಜನ ನಮ್ಮ ಜೊತೆ ಇದ್ದಾರೆ. ಅವರೆಲ್ಲರೂ ವಿನಯ ಬರ್ತಾರೆ ಎಂದು ಕಾಯುತ್ತಿದ್ರು, ಕಾನೂನು ಮೇಲೆ ಭರವಸೆ ಇಟ್ಟು ಕಾಯುತ್ತಿದ್ದರು. ಇವತ್ತು ಅವರು ಇಲ್ಲದೇ ಇರುವುದರಿಂದ ಜನ ನೊಂದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.