ಹುಬ್ಬಳ್ಳಿ:ಧಾರವಾಡದ ಬಾಡ ಗ್ರಾಮದ ಬಳಿ ನಡೆದ ಅಪಘಾತ ಪ್ರಕರಣ ಮನಕಲಕುವಂತದ್ದು, ತಾಯಿಯ ಮುಂದೆಯೇ ತಾಯಿಯ ತೊಡೆಗಳ ಮೇಲೆ ಕುಳಿತಿರುವ ಮಕ್ಕಳು ಮೃತಪಟ್ಟಿದ್ದಾರೆ. ಮತ್ತೆ ಕೆಲವರು ಗಂಭೀರವಾಗಿ ಗಾಯಗೊಂಡು ಐಸಿಯುನಲ್ಲಿದ್ದಾರೆ. ಅವರನ್ನು ನೋಡಿದಾಗ ಕರಳು ಚುರುಕ್ ಎನ್ನುವ ವಾತಾವರಣ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅಪಘಾತ ಪ್ರಕರಣದ ಕರಾಳತೆಯನ್ನು ನೆನೆದರು.
ಧಾರವಾಡ ರಸ್ತೆ ಅಪಘಾತದ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದ ಬಳಿಕ ಮಾತನಾಡಿದ ಅವರು, ಆ ತಾಯಂದಿರ ಆಕ್ರಂದನ ಕೇಳಿದಾಗ ನಮಗೂ ಸಹಿತ ತಡೆದುಕೊಳ್ಳಲು ಆಗಲಾರದಷ್ಟು ನೋವಾಗಿದೆ. ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಮರಳಿ ಮನೆಗೆ ಹೋಗುತ್ತಿರುವ ಸಂದರ್ಭದಲ್ಲಿ ಬಹುದೊಡ್ಡ ಅಪಘಾತ ನಡೆದು 9 ಜನರು ತೀರಿಕೊಂಡಿದ್ದಾರೆ. 8 ಜನರು ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಇಬ್ಬರು ಐಸಿಯುನಲ್ಲಿದ್ದಾರೆ. ಮನಕಲಕುವ ಘಟನೆ ನಡೆದಿದೆ ಎಂದು ಸಂತಾಪ ವ್ಯಕ್ತಪಡಿಸಿದರು.