ಗೊಂಬೆ ಭವಿಷ್ಯದ ಬಗ್ಗೆ ಗ್ರಾಮಸ್ಥ ಹೇಳಿಕೆ ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ವ್ಯಾಪ್ತಿಯ ಹನುಮನಕೊಪ್ಪ ಗ್ರಾಮದಲ್ಲಿ ಮಣ್ಣಿನ ಗೊಂಬೆಗಳ ಮೂಲಕ ಭವಿಷ್ಯ ನುಡಿಸಲಾಗುತ್ತದೆ. 200 ವರ್ಷಗಳ ಇತಿಹಾಸ ಹೊಂದಿರುವ ಗೊಂಬೆ ಭವಿಷ್ಯ ನಿಜವಾಗುತ್ತದೆ ಎಂಬುದು ಇಲ್ಲಿಯ ಜನರ ನಂಬಿಕೆಯಾಗಿದೆ. ಇನ್ನು ರಾಜ್ಯದಲ್ಲಿ ಸರ್ಕಾರ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆಯೂ ಈ ಗೊಂಬೆಗಳು ಮುಂಚಿತವಾಗಿಯೇ ಭವಿಷ್ಯ ನುಡಿದಿದ್ದವು.
ಯುಗಾದಿ ಪಾಡ್ಯದಂದು ಈ ಮಣ್ಣಿನ ಗೊಂಬೆಗಳ ಮೂಲಕ ಭವಿಷ್ಯ ನುಡಿಸಲಾಗಿತ್ತು. ಯುಗಾದಿಯ ಅಮಾವಾಸ್ಯೆಯ ಸಂಜೆ ಆಯಾ ರಾಜ್ಯದ ದಿಕ್ಕಿಗೆ ಸೇನಾಧಿಪತಿ ಗೊಂಬೆಗಳ ಪ್ರತಿಷ್ಠಾಪನೆ ಮಾಡಲಾಗಿತ್ತು. ಮರುದಿನ ಬೆಳಗ್ಗೆ ಹೋಗಿ ನೋಡುವಾಗ ಕರ್ನಾಟಕದ ಗೊಂಬೆಗೆ ಧಕ್ಕೆಯಾಗಿತ್ತಂತೆ. ಕಾಲು ಮುರಿದಿತ್ತು, ತಲೆ ಮೇಲಿನ ಟೋಪಿ ಹಿಂದಕ್ಕೆ ಸರಿದಿತ್ತು. ಆಗಲೇ ಸರ್ಕಾರ ಬದಲಾವಣೆ ನಿಶ್ಚಿತ ಎಂದು ಗ್ರಾಮಸ್ಥರು ಹೇಳಿದ್ದರು. ಅದೇ ರೀತಿಯಾಗಿ ಸರ್ಕಾರ ಬದಲಾವಣೆಯಾಗಿದೆ ಎನ್ನಲಾಗಿದೆ.
ಯಡಿಯೂರಪ್ಪ ಅಧಿಕಾರ ಹೋಗುವುದರ ಬಗ್ಗೆಯೂ ಗೊಂಬೆಗಳು ಭವಿಷ್ಯ ನುಡಿದಿದ್ದವಂತೆ. 2021ರ ಯುಗಾದಿಯಲ್ಲಿ ಕರ್ನಾಟಕದ ಗೊಂಬೆಗೆ ಧಕ್ಕೆ ಆಗಿ ನಾಲ್ಕು ತಿಂಗಳ ಮೊದಲೇ ನಾಯಕತ್ವ ಬದಲಾವಣೆ ಭವಿಷ್ಯ ನುಡಿದಿತ್ತು. ಅದರಂತೆಯೇ ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಈ ವರ್ಷ ಮಾರ್ಚ್ 22ರಂದು ನಾಯಕತ್ವ ಬದಲಾವಣೆ ಬಗ್ಗೆ ಗೊಂಬೆಗಳು ಮತ್ತೆ ಭವಿಷ್ಯ ಹೇಳಿದ್ದವು ಈಗ ಅದೇ ರೀತಿ ಮತ್ತೊಮ್ಮೆ ಭವಿಷ್ಯ ಬಂದಿದೆ.
ಗ್ರಾಮದ ಹಳ್ಳದ ದಂಡೆಯಲ್ಲಿ ನಡೆಯುವ ವಿಸ್ಮಯ ಭವಿಷ್ಯದ ಮೇಲೆ ಗ್ರಾಮಸ್ಥರು ಅಪಾರ ನಂಬಿಕೆ ಇಟ್ಟಿದ್ದಾರೆ. ಪ್ರತಿ ಯುಗಾದಿ ಅಮಾವಾಸ್ಯೆ ದಿನ ರಾತ್ರಿ ಗೊಂಬೆಗಳ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಪಾಡ್ಯದ ದಿನ ನಸುಕಿನ ಜಾವ ಆ ಸ್ಥಳ ನೋಡುವ ಹಿರಿಯರು ಆಯಾ ದಿಕ್ಕಿನ ಗೊಂಬೆಯ ಪರಿಸ್ಥಿತಿ ಆಧರಿಸಿ ರಾಜಕೀಯ ಭವಿಷ್ಯ ಹೇಳುತ್ತಾರೆ. ಇಂದಿರಾ ಗಾಂಧಿ ನಿಧನದ ವರ್ಷವೂ ಸಹ ಭವಿಷ್ಯ ನಿಜವಾಗಿತ್ತಂತೆ. ರಾಷ್ಟ್ರ ನಾಯಕರ ಗೊಂಬೆ ಸಂಪೂರ್ಣವಾಗಿ ಉರುಳಿ ಬಿದ್ದಿತ್ತು. ಅದೇ ವರ್ಷ ಇಂದಿರಾ ಗಾಂಧಿ ಹತ್ಯೆಯಾಗಿತ್ತು ಎನ್ನುತ್ತಾರೆ ಗ್ರಾಮಸ್ಥರು.
ಕೃಷಿ ಭವಿಷ್ಯ ತಿಳಿಯುವ ರೈತರು: ಕೇವಲ ರಾಜಕೀಯ ಕ್ಷೇತ್ರ ಮಾತ್ರವಲ್ಲದೇ ರೈತರು ತಮ್ಮ ಕೃಷಿಯ ಬಗ್ಗೆಯೂ ಭವಿಷ್ಯವನ್ನೂ ಈ ಗೊಂಬೆಗಳ ಮೂಲಕ ಕಂಡುಕೊಳ್ಳುತ್ತಾರೆ. ಇಲ್ಲಿ ಗೊಂಬೆಗಳನ್ನು ಮಾಡಿ ಇಡುವುದರ ಜೊತೆಗೆ ಗ್ರಾಮಸ್ಥರು ಗುಂಡಿಗಳನ್ನು ಮಾಡಿ ಅದರಲ್ಲಿ ಎಲೆಗಳನ್ನು ಇರಿಸುತ್ತಾರೆ. ಅದರೊಳಗೆ ತಾವು ಬೆಳೆಯುವ ಉದ್ದು, ಹೆಸರುಕಾಳು, ಶೇಂಗಾ, ಕಡ್ಲೆ, ಹತ್ತಿ ಎಲ್ಲವನ್ನೂ ಸ್ವಲ್ಪ ಪ್ರಮಾಣದಲ್ಲಿ ಹಾಕಿಟ್ಟು, ಅದರ ಮೇಲೆ ಮತ್ತೊಂದು ಎಲೆಯಿಂದ ಮುಚ್ಚುತ್ತಾರೆ. ಅದರ ಮೇಲೆ ಮಣ್ಣಿನಿಂದ ಮಾಡಿದ ಉಂಡೆಯನ್ನೂ ಸಹ ಇಡುತ್ತಾರೆ. ಇದರ ನಾಲ್ಕೂ ತುದಿಯಲ್ಲಿ ಗೊಂಬೆಗಳನ್ನು ಮಾಡಿಡಲಾಗುತ್ತದೆ.
ಇದರಿಂದ ಮುಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಈ ಬೆಳೆಗಳ ಬೆಲೆ ಯಾವ ರೀತಿ ಏರು ಪೇರಾಗಬಹುದು. ಯಾವ ತಿಂಗಳಲ್ಲಿ ಯಾವ ಬೆಳೆಗೆ ಬೇಡಿಕೆ ಹೆಚ್ಚಾಗಬಹುದು ಎಂಬುದನ್ನೂ ರೈತರು ಕಂಡುಕೊಳ್ಳುತ್ತಾರೆ ಎನ್ನಲಾಗಿದೆ. ಈ ಗೊಂಬೆ ಭವಿಷ್ಯ ಕೇವಲ ಇಲ್ಲಿಯ ಜನರ ನಂಬಿಕೆಯಾಗಿದೆ. ಇದಕ್ಕೆ ಯಾವುದೇ ವೈಜ್ಞಾನಿಕ ತಳಹದಿ ಇರುವ ಬಗ್ಗೆ ಈಟಿವಿ ಭಾರತ ಖಚಿತಪಡಿಸುವುದಿಲ್ಲ.
ಇದನ್ನೂ ಓದಿ:ಸಿಎಂ ಸ್ಥಾನಕ್ಕೆ ಪರಮೇಶ್ವರ ಅವರನ್ನೂ ಪರಿಗಣಿಸಿ: ತುಮಕೂರಿನಲ್ಲಿ ಬೆಂಬಲಿಗರಿಂದ ಬೃಹತ್ ಪ್ರತಿಭಟನೆ