ಧಾರವಾಡ:ಜಿಲ್ಲೆಯಲ್ಲಿಕಳೆದ ಕೆಲ ತಿಂಗಳುಗಳ ಹಿಂದೆ ಸುರಿದ ಭಾರೀ ಮಳೆ ಬಹಳ ಅವಾಂತರ ಸೃಷ್ಟಿಸಿತ್ತು. ಒಂದೆಡೆ ಬೆಳೆದ ಬೆಳೆಗಳು ನೀರು ಪಾಲಾದ್ರೆ, ಇನ್ನೊಂದೆಡೆ ಹಲವರು ಮನೆ-ಮಠ ಕಳೆದುಕೊಂಡಿದ್ದರು. ಮನೆ ಕಳೆದುಕೊಂಡವರಿಗೆ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಆದರೆ ಪರಿಹಾರ ಅರ್ಹ ಫಲಾನುಭವಿಗಳಿಗೆ ತಲುಪದೇ ಉಳ್ಳವರ ಪಾಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕಳೆದ ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಎಡೆಬಿಡದೇ ಸುರಿದ ಮಳೆಯಿಂದ ಹಲವರು ಮನೆ ಕಳೆದುಕೊಂಡಿದ್ದಾರೆ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಮನೆ ಕಳೆದುಕೊಂಡವರಿಗೆ ಇನ್ನೂ ಕೂಡ ಪರಿಹಾರ ತಲುಪಿಲ್ಲ. ಸರಿಯಾಗಿ ಫಲಾನುಭವಿಗಳನ್ನು ಆಯ್ಕೆ ಮಾಡದ ಕಾರಣ ಅರ್ಹ ಫಲಾನುಭವಿಗಳು ಪರಿಹಾರ ಸಿಗದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಧಾರವಾಡ ತಾಲೂಕಿನ ಯಾದವಾಡ ಗ್ರಾಮವೊಂದರಲ್ಲಿ ಸುಮಾರು 50ಕ್ಕೂ ಹೆಚ್ಚು ಮನೆಗಳು ಮಳೆಗೆ ನೆಲಕ್ಕುರುಳಿವೆ. ಆದರೆ ಯಾದವಾಡ ಗ್ರಾಮದಲ್ಲಿ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ಇದುವರೆಗೆ ಪರಿಹಾರ ನೀಡುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ಅವರಿಗೆ ಬೇಕಾದವರಿಗೆ ಮಾತ್ರ ಮನೆ ಮಂಜೂರು ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.