ಹುಬ್ಬಳ್ಳಿ:ದಿನದಿಂದ ದಿನಕ್ಕೆ ರಂಗೇರುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ. ಇತ್ತೀಚೆಗೆ ಧಾರವಾಡದಲ್ಲಿ ನಡೆದ ನಿರ್ಮಾಣ ಹಂತದ ಕಟ್ಟಡ ಕುಸಿತವೇ ಅಭ್ಯರ್ಥಿ ಆಯ್ಕೆಯ ಹೊಸ ಆಯಾಮಕ್ಕೆ ನಾಂದಿಯಾಗಿದೆ ಎಂದು ಹೇಳಲಾಗುತ್ತಿದೆ.
ಹೌದು, ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯು ಧಾರವಾಡ ಕಟ್ಟಡ ದುರಂತ ಪ್ರಕರಣದಿಂದ ಹೊಸ ತಿರುವು ಪಡೆದುಕೊಂಡಿದೆ. ಈ ಹಿಂದೆ ಕಾಂಗ್ರೆಸ್ ಸಂಭವನೀಯ ಪಟ್ಟಿಯಲ್ಲಿ ಹೆಸರು ಸೂಚನೆಗೊಂಡಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಟಿಕೆಟ್ ಕೈ ತಪ್ಪುವ ಭೀತಿಯಲ್ಲಿದ್ದಾರೆ ಎನ್ನಲಾಗಿದೆ.
ಧಾರವಾಡದಲ್ಲಿ ನಿರ್ಮಾಣ ಹಂತ ಕಟ್ಟಡ ಕುಸಿತಗೊಂಡು ಹಲವಾರು ಸಾವು ನೋವು ಸಂಭವಿಸಿದೆ. ಈ ಕಟ್ಟಡ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಾವ ಗಂಗಪ್ಪ ಶಿಂತ್ರಿ ಅವರಿಗೆ ಸೇರಿದ್ದು. ಈ ಹಿನ್ನೆಲೆಯಲ್ಲಿ ಕೈ ಪಕ್ಷದ ವರಿಷ್ಠರು ವಿನಯ್ ಕುಲಕರ್ಣಿಗೆ ಲೋಕಸಭಾ ಟಿಕೆಟ್ ವಿತರಣೆಯಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ ಎನ್ನಲಾಗಿದೆ. ಅಲ್ಲದೇ ಈ ಭಾರಿಯ ಲೋಕಸಭೆಗೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಕೈ ಬಿಡಬೇಕೆಂದು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿರುವುದು ಕಾಂಗ್ರೆಸ್ ಆಪ್ತ ವಲಯದಿಂದ ಕೇಳಿ ಬರುತ್ತಿದೆ.