ಹುಬ್ಬಳ್ಳಿ :ನಗರದ ಗಬ್ಬೂರು ಕ್ರಾಸ್‌ನಲ್ಲಿ ನೂತನವಾಗಿ ನಿರ್ಮಿಸಿರುವ ಧಾರವಾಡ ಪೂರ್ವ ಆರ್‌ಟಿಒ ಕಚೇರಿ ಕಾಮಗಾರಿ ಕಾರ್ಯ ಕಳೆದ ಸೆಪ್ಟೆಂಬರ್‌ನಲ್ಲೇ ಪೂರ್ಣಗೊಂಡಿದೆ. ಆದರೂ ಇನ್ನು ಉದ್ಘಾಟನಾ ಭಾಗ್ಯ ಒಲಿದು ಬಂದಿಲ್ಲ.
ಧಾರವಾಡ ಜಿಲ್ಲೆಗೆ ಒಂದೇ ಆರ್‌ಟಿಒ ಕಚೇರಿ 2017ರ ವರೆಗೆ ನವನಗರದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಇದರಿಂದ ಆಡಳಿತ ಹಾಗೂ ವಿವಿಧ ಸೇವೆಗಳಿಗೆ ಆಗಮಿಸುವ ಸಾರ್ವಜನಿಕರಿಗೆ ನಾನಾ ಸಮಸ್ಯೆಯಾಗುತ್ತಿತ್ತು. ಈ ಕಾರಣದಿಂದ 2017ರಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಧಾರವಾಡ ಪೂರ್ವ ಮತ್ತು ಧಾರವಾಡ ಪಶ್ಚಿಮವನ್ನು ಎರಡು ಆರ್‌ಟಿಒ ಕಚೇರಿಗಳಾಗಿ ವಿಂಗಡಿಸಲಾಗಿತ್ತು.
ಅದರಂತೆ ನಗರದ ರಾಷ್ಟ್ರೀಯ ಹೆದ್ದಾರಿ 4 ರ ಬಳಿಯ ಗಬ್ಬೂರು ಬೈಪಾಸ್ ಸಮೀಪ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪೂರ್ವ ಆರ್ ಟಿ ಒ ಕಚೇರಿಯನ್ನು 2017 ರಲ್ಲಿ ಪ್ರಾರಂಭಿಸಲಾಯಿತು. ಈ ವೇಳೆ ಶಾಸಕರಾಗಿದ್ದ ಪ್ರಸಾದ್ ಅಬ್ಬಯ್ಯ ಅವರು ಮುತುವರ್ಜಿ ವಹಿಸಿ ತಮ್ಮ ಕ್ಷೇತ್ರದಲ್ಲಿ ಆರ್‌ಟಿಒ ಕಚೇರಿ ಇರುವಂತೆ ನೋಡಿಕೊಂಡರು. ಅದರಂತೆ ಆರ್‌ಟಿಒ ಪೂರ್ವ ಕಚೇರಿಯನ್ನು ಬಾಡಿಗೆ ಕಟ್ಟಡದಿಂದ ಕಾರ್ಯಾರಂಭ ಮಾಡಿದ್ದು, ಪ್ರತಿ ತಿಂಗಳು 4.8 ಲಕ್ಷ ಬಾಡಿಗೆ ಪಾವತಿಸುತ್ತಿದೆ.
ನಂತರ 2019 ರಲ್ಲಿ ಸರ್ಕಾರ 1 ಎಕರೆ 20 ಗುಂಟಾ ಜಾಗದಲ್ಲಿ 8 ಕೋಟಿ ರೂಪಾಯಿಗಳಲ್ಲಿ ಹೊಸ ಕಟ್ಟಡ ಮಂಜೂರು ಮಾಡಿತ್ತು. ಕಾಮಗಾರಿಯನ್ನು 2019 ರಲ್ಲಿ ಪ್ರಾರಂಭಿಸಲಾಯಿತು. ಆದರೂ ಅನೇಕ ಕಾರಣದಿಂದ ಕಾಮಗಾರಿ ಕುಂಟುತ್ತಾ, ತೆವಳುತ್ತಾ ಕಳೆದ ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಲಾಗಿದೆ. ಆದರೆ, ಈ ನೂತನ ಕಟ್ಟಡಕ್ಕೆ ಮಾತ್ರ ಇನ್ನು ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಈ ಹಿಂದೆ ಆರ್‌ಟಿಒ ಕಚೇರಿ ಸ್ಥಾಪಿಸಲು ಪ್ರಸಾದ್ ಅಬ್ಬಯ್ಯ ಮಹತ್ವದ ಪಾತ್ರ ವಹಿಸಿದ್ದರು. ಅದೇ ರೀತಿ ಈಗ ಶಾಸಕರು ಹೆಚ್ಚಿನ ಕಾಳಜಿ ವಹಿಸಿ ಉದ್ಘಾಟನೆಗೆ ಮುಂದಾಗಬೇಕಿದೆ.