ಧಾರವಾಡ: ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆಯು ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ಶನಿವಾರ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಹು-ಧಾ ಸೆಂಟ್ರಲ್ ಹಾಗೂ ಹು-ಧಾ ಪಶ್ಚಿಮ ಮತಕ್ಷೇತ್ರಗಳ 19 ಸುತ್ತಿನ ಮತ ಎಣಿಕೆ ಹಾಗೂ ಜಿಲ್ಲೆಯ ಉಳಿದ ಮತಕ್ಷೇತ್ರಗಳ 17 ಸುತ್ತಿನ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ, ಪ್ರತಿ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಗೆ ಪ್ರತ್ಯೇಕ ಕೊಠಡಿ ಮಾಡಲಾಗಿದೆ. ಅಂಚೆ ಮತಪತ್ರ ಮತ್ತು ವಿದ್ಯುನ್ಮಾನ ಮತಯಂತ್ರಗಳಲ್ಲಿನ ಮತ ಎಣಿಕೆಗಾಗಿ 13 ಸೇರಿ ಒಟ್ಟು 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ ಮಾಹಿತಿ ನೀಡಿದ್ದಾರೆ.
ನವಲಗುಂದ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಯು 17 ಸುತ್ತು, ಕುಂದಗೊಳ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಯು 17 ಸುತ್ತು, ಧಾರವಾಡ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಯು 17 ಸುತ್ತು, ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆಯು 17 ಸುತ್ತು, ಕಲಘಟಗಿ ವಿಧಾನಸಭಾ ಮತಕ್ಷೇತ್ರದ ಮತ ಎಣಿಕೆ 17 ಸುತ್ತುಗಳಲ್ಲಿ ನಡೆಯಲಿದೆ ಮತ್ತು ಹುಬ್ಬಳ್ಳಿ - ಧಾರವಾಡ ಸೆಂಟ್ರಲ್ ಹಾಗೂ ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಮತಕ್ಷೇತ್ರಗಳ ಮತ ಎಣಿಕೆ ಕಾರ್ಯವು 19 ಸುತ್ತುಗಳಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮತ ಎಣಿಕೆ ಆರಂಭದಲ್ಲಿ ಅಂಚೆ ಮತಪತ್ರಗಳ ಎಣಿಕೆ ಆರಂಭವಾಗುತ್ತದೆ. ಮತ್ತು ಸ್ವಲ್ಪ ಸಮಯದ ನಂತರ ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿ ದಾಖಲಾಗಿರುವ ಮತಗಳ ಎಣಿಕಾ ಕಾರ್ಯ ಆರಂಭಿಸಲಾಗುತ್ತದೆ. ಮತ ಎಣಿಕೆ ಕೇಂದ್ರದ ಸುತ್ತ ಮೂರು ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ನಾಳೆ ಮಧ್ಯಾಹ್ನದ ಹೊತ್ತಿಗೆ ಚುನಾವಣಾ ಫಲಿತಾಂಶ ಬರುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.