ಧಾರವಾಡ: ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಒಂದು ದೃಢಪಟ್ಟಿರುವುದರಿಂದ ಅಗತ್ಯ ವಸ್ತುಗಳ ಪೂರೈಕೆ ಹೊರತುಪಡಿಸಿ ಉಳಿದ ಎಲ್ಲ ಅಂಗಡಿ ಮುಂಗಟ್ಟುಗಳು, ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ನಿಷೇಧಿಸಲು ಸರ್ಕಾರ ನಿರ್ದೇಶನ ನೀಡಿದೆ. ನಿಯಮಾನುಸಾರ ಪರಿಣಾಮಕಾರಿ ಲಾಕ್‍ಡೌನ್ ಮಾಡಲು ಕಂದಾಯ, ಪೊಲೀಸ್, ಆರೋಗ್ಯ ಹಾಗೂ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ತಕ್ಷಣದಿಂದಲೇ ಚುರುಕಿನಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕಾರ್ಯಪಡೆ ತುರ್ತು ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲಾದ್ಯಂತ ಸ್ಥಾಪಿಸಲಾಗಿರುವ ಎಲ್ಲಾ ಚೆಕ್ ಪೋಸ್ಟ್ಗಳಲ್ಲಿ ದಿನದ 24 ಗಂಟೆಗಳ ಕಾಲ ನಿರಂತರವಾಗಿ ಕಾರ್ಯ ನಿರ್ವಹಿಸಬೇಕು. ಅಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್ ಕಾರ್ಯ ಹಾಗೂ ಸ್ವಯಂ ಘೋಷಣಾ ಪ್ರಮಾಣ ಪತ್ರ ಪಡೆಯಬೇಕು. ಪೊಲೀಸರು ವಾಹನ ತಪಾಸಣೆ ಮತ್ತು ಪ್ರಯಾಣಿಕರ ಪ್ರವಾಸ ಹಿನ್ನೆಲೆ ವಿವರ ಸಂಗ್ರಹಿಸಬೇಕು. ತಲಾ 12 ತಾಸುಗಳ ಸರದಿಯಲ್ಲಿ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಸೂಚಿಸಿದರು.
ವಿದೇಶಗಳಿಂದ ಬಂದಿರುವ ವ್ಯಕ್ತಿಗಳು ಹೊರಗೆ ತಿರುಗಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ಮಾಹಿತಿಗಳು ಬರುತ್ತಿವೆ. ಆದರೆ, ಅವುಗಳಲ್ಲಿ ಬಹುತೇಕ ಖಚಿತತೆ ಇರುವುದಿಲ್ಲ. ಇವುಗಳನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು. ಪೊಲೀಸ್ ಇಲಾಖೆ ಸಹಕಾರದೊಂದಿಗೆ ಸರ್ಕಾರದ ಶಿಷ್ಟಾಚಾರ ಪಾಲಿಸಲು ಹೋಮ್ ಕ್ವಾರಂಟೈನ್ ಅವಧಿಯಲ್ಲಿ ಇರುವವರಿಗೆ ಕಟ್ಟುನಿಟ್ಟಾಗಿ ತಿಳಿಸಲು ತಂಡಗಳನ್ನು ರಚಿಸಬೇಕು. ವದಂತಿಗಳನ್ನು ಹರಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು. ಸೋಂಕು ದೃಢಪಟ್ಟಿರುವ ಪ್ರದೇಶದಲ್ಲಿ ನಿಯೋಜಿಸಲ್ಪಟ್ಟಿರುವ ಬೀಟ್ ಪೊಲೀಸರು ಹೆಚ್ಚು ಜಾಗೃತರಾಗಿ ಕಾರ್ಯ ನಿರ್ವಹಿಸಬೇಕು. ಅತಿಹೆಚ್ಚು ಅಪಾಯಕ್ಕೊಳಗಾಗಬಹುದಾದ ಸಾಧ್ಯತೆಗಳಿರುವ ಪ್ರದೇಶದಲ್ಲಿನ ವಿಚಕ್ಷಣೆಗೆ ನೋಡೆಲ್ ಅಧಿಕಾರಿಗಳನ್ನು ನೇಮಿಸಲು ಸೂಚಿಸಿದರು.
ಇನ್ನು ಸರ್ಕಾರಿ ಕಚೇರಿಗಳಲ್ಲಿ 60 ವರ್ಷ ಮೀರಿದ ನಿವೃತ್ತರು ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಕರ್ತವ್ಯಕ್ಕೆ ಹಾಜರಾಗದಿರಲು ತಿಳಿಸಬೇಕು. ಸಾಮಾಜಿಕ ಅಂತರ, ಸ್ವಚ್ಚತೆ ಕಾಪಾಡಿಕೊಳ್ಳಲು ಆದ್ಯತೆ ನೀಡಬೇಕು ತಿಳಿಸಿದರು. ಸಭೆಯಲ್ಲಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್, ಜಿ.ಪಂ. ಸಿಇಓ ಡಾ.ಬಿ.ಸಿ.ಸತೀಶ, ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.