ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಹೋಬಳಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಕಾಳಜಿ ಕೇಂದ್ರಗಳನ್ನು ಆರಂಭಿಸಿ ಕೋವಿಡ್ ಮುಕ್ತ ಹಳ್ಳಿ ಮಾಡುವಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ನಗರದ ಸರ್ಕ್ಯೂಟ್ ಹೌಸ್ನಲ್ಲಿ ಮಾಧ್ಯಮಗೋಷ್ಟಿ ಏರ್ಪಡಿಸಿ ಮಾತನಾಡಿದ ಅವರು, ಕೊರೊನಾ ಸೋಂಕು ಇತ್ತೀಚೆಗೆ ಹಳ್ಳಿಗಳಲ್ಲಿ ಕಂಡು ಬರುತ್ತಿದೆ. ಸೋಂಕಿನ ಲಕ್ಷಣಯುಳ್ಳವರು ಐಸೋಲೇಷನ್ ಆಗಲು ಪಟ್ಟಣದ ಆಸ್ಪತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಈ ದಿಸೆಯಲ್ಲಿ ಜಿಲ್ಲಾಡಳಿತದಿಂದ ಹಳ್ಳಿಗಳಲ್ಲಿಯೇ ಕೊರೊನಾ ಕಾಳಜಿ ಕೇಂದ್ರ ತೆರೆದು ಅಲ್ಲಿಯೇ ಸೋಂಕಿತರ ಆರೈಕೆ ಮಾಡುವ ಉದ್ದೇಶ ಹೊಂದಿದ್ದೇವೆ. ಇದಕ್ಕಾಗಿ ಈಗಾಗಲೇ ವಿವಿಧೆಡೆ 20 ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದ್ದು, ಹಳ್ಳಿಗಳಲ್ಲಿ ಶೇ.60 ರಷ್ಟು ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ ಎಂದರು.
ಇನ್ನೂ ಹಳ್ಳಿಗರಲ್ಲಿಯೇ ಕೊರೊನಾ ಬಗ್ಗೆ ಅರಿವು ಮೂಡುತ್ತಿದ್ದು, ಸ್ವಯಂಪ್ರೇರಿತವಾಗಿ ಆಯಾ ಗ್ರಾಮ ಪಂಚಾಯಿತಿಗಳು ಲಾಕ್ ಡೌನ್ ಮಾಡಿಕೊಳ್ಳುತ್ತಿವೆ. ಈ ಲಾಕ್‌ಡೌನ್ ಮುಗಿಯುವ ವೇಳೆಗೆ ಜಿಲ್ಲೆಯಲ್ಲಿ ಕೊರೊನಾ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಲಾಗುವುದು ಎಂದರು.