ಧಾರವಾಡ: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳ ವರದಿಯಲ್ಲಿ ಏರಿಕೆಯಾಗುತ್ತಿರುವುದು ಎರಡನೇ ಅಲೆಯ ಅಪಾಯವನ್ನು ಸೂಚಿಸುತ್ತದೆ. ಇದನ್ನು ನಿಯಂತ್ರಿಸಲು ಮುಖ್ಯಮಂತ್ರಿಗಳ ಸೂಚನೆಯಂತೆ ಜಿಲ್ಲಾದ್ಯಂತ ಮುಂಬರುವ ಎಲ್ಲ ಜಾತ್ರೆ, ಉರುಸು ರದ್ದುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.
ಕೋವಿಡ್ ನಿಯಂತ್ರಣದ ತಾಂತ್ರಿಕ ಮತ್ತು ತಜ್ಞರ ಸಲಹಾ ಸಮಿತಿಯೊಂದಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆ ವಿಡಿಯೋ ಸಂವಾದ ಮೂಲಕ ನಡೆಸಿದ ಸಭೆಯ ಬಳಿಕ ನೀಡಿದ ಸೂಚನೆಗಳನ್ನು ಆಧರಿಸಿ, ಜಿಲ್ಲಾಧಿಕಾರಿಗಳು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆ ಕೈಗೊಂಡು ಈ ನಿರ್ದೇಶನಗಳನ್ನು ನೀಡಿದರು.
ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಕಾಪಾಡಿಕೊಳ್ಳದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮದುವೆ, ಸಾಮಾಜಿಕ, ಧಾರ್ಮಿಕ, ರಾಜಕೀಯ ಆಚರಣೆಗಳಿಗೆ ಸರ್ಕಾರ ವಿಧಿಸಿರುವ ಷರತ್ತುಗಳನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಕಳೆದ ವರ್ಷ ಈ ದಿನಗಳಲ್ಲಿ ಇದ್ದ ಕೋವಿಡ್-19ರ ಸ್ಥಿತಿಯೇ ಈಗ ಮತ್ತೆ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಹಾಗೂ ಲಸಿಕಾ ಕಾರ್ಯ ತೀವ್ರಗೊಳಿಸಬೇಕು. ಜಿಲ್ಲೆಯ ಎಲ್ಲ ತಹಶೀಲ್ದಾರರು ಈ ನಿಟ್ಟಿನಲ್ಲಿ ಹೆಚ್ಚು ಎಚ್ಚರವಹಿಸಬೇಕು. ಭಾರತ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಆಚರಣೆಗಳು ಹಾಗೂ ಸಮಾರಂಭಗಳಲ್ಲಿ ಪ್ರತಿ ವ್ಯಕ್ತಿಗೆ 3.25 ಚದರ ಮೀಟರ್ ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಬೇಕು ಎಂದರು.
ಮದುವೆಗಳಿಗೆ ತೆರೆದ ಪ್ರದೇಶದಲ್ಲಿ 500, ಒಳಾಗಂಣದಲ್ಲಿ 200 ಜನರಿಗೆ ಮಾತ್ರ ಅವಕಾಶಕ್ಕೆ ಪೂರ್ವಾನುಮತಿ ಕಡ್ಡಾಯ. ಜನ್ಮದಿನ ಇತರ ಆಚರಣೆಗಳಿಗೆ, ಶವಸಂಸ್ಕಾರ, ಅಂತ್ಯಕ್ರಿಯೆ, ಧಾರ್ಮಿಕ, ರಾಜಕೀಯ ಆಚರಣೆಗಳಿಗೆ ಸರ್ಕಾರ ನಿಗದಿ ಪಡಿಸಿರುವ ಸಂಖ್ಯೆಗೆ ಸೀಮಿತಗೊಳಿಸಿ ಅವಕಾಶ ನೀಡಬೇಕು. ಮಾಸ್ಕ್ ಹಾಕದ ವ್ಯಕ್ತಿಗಳಿಗೆ ದಂಡ ವಿಧಿಸುವ ಕಾರ್ಯವನ್ನು ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಕೋಶ, ಗ್ರಾಮ ಪಂಚಾಯಿತಿಗಳು ಚುರುಕುಗೊಳಿಸಬೇಕು ಎಂದು ಸೂಚಿಸಿದರು.