ಧಾರವಾಡ:ನಾಳೆ ವಿಧಾನಸಭೆ ಚುನಾವಣಾ ಮತದಾನದ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ಅವರು ಇಂದು ಮಸ್ಟರಿಂಗ್ ಕಾರ್ಯವನ್ನು ಪರಿಶೀಲನೆ ನಡೆಸಿದರು. ಧಾರವಾಡ ಬಾಸೆಲ್ ಮಿಷನ್ ಶಾಲೆಗೆ ಭೇಟಿ ನೀಡಿದ ಅವರು ಮತಗಟ್ಟೆಗೆ ತೆರಳುವ ಸಿಬ್ಬಂದಿಗಳಿಗೆ ಅವಶ್ಯಕ ಮಾಹಿತಿ ನೀಡಿದರು.
ಪರಿಶೀಲನೆ ಬಳಿಕ ಮಾತನಾಡಿದ ಅವರು, ಜಿಲ್ಲೆ 7 ಕ್ಷೇತ್ರಗಳಲ್ಲಿ ಮಸ್ಟರಿಂಗ್ ಕಾರ್ಯ ನಡೆದಿದೆ. ಧಾರವಾಡ ಜಿಲ್ಲೆಯಲ್ಲಿ ಸುಮಾರು 15 ಲಕ್ಷಕ್ಕೂ ಹೆಚ್ಚು ಮತಗಳಿವೆ. 1642 ಮತಗಟ್ಟೆಗಳಿವೆ. ಎಲ್ಲ ಮತಗಟ್ಟೆಗಳಲ್ಲು ಕನಿಷ್ಠ ಮೂಲ ಸೌಕರ್ಯಗಳನ್ನು ಒದಗಿಸಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್ ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಹೀಗಾಗಿ ಪ್ರತಿ ಮತಗಟ್ಟೆಯಲ್ಲಿ ವಿಶ್ರಾಂತಿ ಕೊಠಡಿ ತೆರೆಯಲಾಗಿದೆ. ನಗರದ ಪ್ರದೇಶದಲ್ಲಿ ಕ್ಯೂ ಹೆಚ್ಚಾಗುವ ಮತಗಟ್ಟೆಯ ಹೊರಗೆ ಶಾಮಿಯಾನ ಹಾಕಲಾಗುವುದು ಎಂದು ಹೇಳಿದರು.
ಕಳೆದ ಚುನಾವಣೆಯಲ್ಲಿ ನಗರ ಪ್ರದೇಶದಲ್ಲಿ ಕಡಿಮೆ ಮತದಾನ ಆಗಿದೆ. ಈ ಸಲ ಮತದಾನ ಹೆಚ್ಚಿಸಲು ಕ್ರಮ ವಹಿಸಲಾಗಿದೆ. ಮತ ಹಾಕದೇ ಇರೋದಕ್ಕೆ ಯಾವುದೇ ಕಾರಣ ಇಲ್ಲ, ಯಾವುದೇ ಅಭ್ಯರ್ಥಿ ಮೇಲೆ ಭರವಸೆ ಇಲ್ಲದಿದ್ದಲ್ಲಿ ನೋಟಾ ಅವಕಾಶ ಇದೆ. ಹೀಗಾಗಿ ಎಲ್ಲರೂ ಮತದಾರರು ಮತಗಟ್ಟೆಗೆ ಬಂದು ಮತ ಹಾಕಬೇಕು ಎಂದು ಮನವಿ ಮಾಡಿಕೊಂಡರು. ಸೈಕ್ಲೋನ್ ಎಫೆಕ್ಟ್ ಸೂಚನೆ ಸಿಕ್ಕಿದೆ. ಅದಕ್ಕೆ ತಕ್ಕಂತೆ ಜಾಗೃತಿ ವಹಿಸಲಾಗಿದೆ. ಮತ ಸಾಮಗ್ರಿಗಳ ಜೊತೆಗೆ ಪ್ಲಾಸ್ಟಿಕ್ ಕವರ್ ಕೊಡಲಾಗಿದೆ. ಜಿಲ್ಲೆಗೆ 22 ಕೇಂದ್ರ ಭದ್ರತಾ ಪಡೆಯ ತುಕಡಿ ಬಂದಿವೆ. ಇದರೊಂದಿಗೆ 2 ಸಾವಿರ ಪೊಲೀಸ್ ಸಿಬ್ಬಂದಿ ಮತ್ತು ಮೀಸಲು ಪಡೆಯ ಪೊಲೀಸರೂ ಇರುತ್ತಾರೆ. ಎಲ್ಲ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದರು.
ಇದನ್ನೂ ಓದಿ:ನಾಳೆ ಪ್ರಜಾ ತೀರ್ಪು! ಗಡಿಭಾಗಗಳಲ್ಲಿ ಪೊಲೀಸರಿಂದ ಕಟ್ಟೆಚ್ಚರ, ನಕಲಿ ಮತದಾನಕ್ಕೆ ಅವಕಾಶವಿಲ್ಲ