ಧಾರವಾಡ :ಜಿಲ್ಲಾಸ್ಪತ್ರೆಯಲ್ಲಿ ನೂತನವಾಗಿ ಸ್ಥಾಪಿಸಿರುವ 6 ಸಾವಿರ ಲೀಟರ್ ಸಾಮರ್ಥ್ಯದ ಕೇಂದ್ರೀಕೃತ ಆ್ಯಕ್ಸಿಜನ್ ಪೂರೈಕೆಯ ಘಟಕಕ್ಕೆ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಚಾಲನೆ ನೀಡಿದರು.
ಜಿಲ್ಲಾಸ್ಪತ್ರೆಯಲ್ಲಿ ಕೇಂದ್ರೀಕೃತ ಆ್ಯಕ್ಸಿಜನ್ ಪೂರೈಕೆ ಘಟಕಕ್ಕೆ ಡಿಸಿ ಚಾಲನೆ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಈವರೆಗೆ ಪ್ರತಿದಿನ 80 ರಿಂದ 100 ಜಂಬೋ ಆ್ಯಕ್ಸಿಜನ್ ಸಿಲಿಂಡರುಗಳನ್ನು ವೈದ್ಯಕೀಯ ಚಿಕಿತ್ಸೆಗೆ ಬಳಸಲಾಗುತ್ತಿತ್ತು. ಇವುಗಳನ್ನು ಪ್ರತಿದಿನ ಪೂರೈಕೆದಾರರ ಬಳಿ ತೆಗೆದುಕೊಂಡು ಹೋಗಿ ತುಂಬಿಸಿಕೊಂಡು ಬರಬೇಕಾಗಿತ್ತು.
ಈಗ 6 ಸಾವಿರ ಲೀಟರ್ ಸಾಮರ್ಥ್ಯದ ಕೇಂದ್ರೀಕೃತ ಆ್ಯಕ್ಸಿಜನ್ ಪೂರೈಕೆ ಘಟಕ ಸ್ಥಾಪನೆಯಿಂದ ಸಮಯ, ಸಾರಿಗೆ ವೆಚ್ಚ ಉಳಿಯಲಿದೆ. ಸುರಕ್ಷತೆ ಮತ್ತು ಲಭ್ಯತೆ ದೃಷ್ಟಿಯಿಂದಲೂ ಸಾಕಷ್ಟು ಅನುಕೂಲವಾಗಲಿದೆ.
ಧಾರವಾಡ ಜನತೆಗೆ, ಜಿಲ್ಲಾ ಆಸ್ಪತ್ರೆಗೆ ಇದೊಂದು ಶಾಶ್ವತ ಆಸ್ತಿ. ಈ ಘಟಕ ಸ್ಥಾಪನೆ ಪ್ರಕ್ರಿಯೆಗೆ ಸರ್ಕಾರದ ಮಟ್ಟದಲ್ಲಿ ತ್ವರಿತ ಆರ್ಥಿಕ ಮತ್ತು ತಾಂತ್ರಿಕ ಅನುಮೋದನೆ ದೊರೆತು ಸಾಕಷ್ಟು ಸಹಕಾರ ಸಿಕ್ಕಿದೆ ಎಂದರು.
ಜಿಲ್ಲೆಯಲ್ಲಿ ಕೋವಿಡ್ ಚಿಕಿತ್ಸೆಗೆ ಕಿಮ್ಸ್ ಸಂಸ್ಥೆ ದೊಡ್ಡ ಕೊಡುಗೆ ನೀಡಿದೆ. ಇದೇ ರೀತಿ ಜಿಲ್ಲಾಸ್ಪತ್ರೆಯೂ ಕೋವಿಡ್‌ಗೆ ಉತ್ತಮ ಚಿಕಿತ್ಸೆ ನೀಡುತ್ತಿದೆ. ಈವರೆಗೆ ಇಲ್ಲಿಂದ ಸುಮಾರು 540ಕ್ಕೂ ಹೆಚ್ಚು ರೋಗಿಗಳು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಸಿಬ್ಬಂದಿ, ಮಾನವ ಸಂಪನ್ಮೂಲ, ತಜ್ಞ ವೈದ್ಯರ ಕೊರತೆಯ ನಡುವೆಯೂ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ವೈದ್ಯಾಧಿಕಾರಿಗಳು ಅಹರ್ನಿಶಿ ದುಡಿಯುತ್ತಿರುವುದು ಮಾದರಿ ಎಂದು ಜಿಲ್ಲಾಧಿಕಾರಿಗಳು ತುಂಬು ಹೃದಯದಿಂದ ಶ್ಲಾಘಿಸಿದರು.