ಧಾರವಾಡ:ಜಿಲ್ಲೆಯಲ್ಲಿ ನಾಳೆಯಿಂದ (ನ.20 ರಿಂದ 23 ವರೆಗೆ) ಮುಂದಿನ ನಾಲ್ಕು ದಿನಗಳವರೆಗೆ ಮಳೆ (Heavy rain in Dharwad) ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ನಾಳೆ ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ಘೋಷಿಸಿ (Dhawad Schools closed due to rain) ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಇಂದು ಸಂಜೆ ಆದೇಶ ಹೊರಡಿಸಿದ್ದಾರೆ.
ಜಿಲ್ಲಾಡಳಿತದಿಂದ ಮಳೆ ಹಾನಿ ತಡೆಯಲು ಅಗತ್ಯ ಕ್ರಮ ವಹಿಸಿದ್ದು, ಕೆರೆ ಕಟ್ಟೆಗಳ ಕಡೆ ಜನ, ಜಾನುವಾರು ಹೋಗದಂತೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಜಿಲ್ಲೆಯ ಎಲ್ಲ ಶಾಲಾ ಮುಖ್ಯಸ್ಥರಿಗೆ, ವಿದ್ಯಾರ್ಥಿಗಳ ಪಾಲಕರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲೆಯಲ್ಲಿ ವಾಡಿಕೆಯಂತೆ 26.3 ಮೀ.ಮೀ ಮಳೆಯಾಗಬೇಕಿತ್ತು. ಆದರೆ ಅಕಾಲಿಕ ಮಳೆಯಿಂದ ಈ ಬಾರಿ 70.1 ಮೀ.ಮೀ ಮಳೆಯಾಗಿದೆ. ಅಳ್ನಾವರ ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದೆ ಎಂದು ಈ ಮೊದಲು ಮಾಹಿತಿ ನೀಡಿದ್ದರು.