ಧಾರವಾಡ:ಸವದತ್ತಿ ತಾಲೂಕಿನ ನವಿಲುತೀರ್ಥ ಜಲಾಶಯದ ಬಳಿಕಳೆದ ಭಾನುವಾರ ಧಾರವಾಡ ಮೂಲದ ಆಸ್ಟ್ರೇಲಿಯಾ ನಿವಾಸಿ ಪ್ರಿಯದರ್ಶಿನಿ ಲಿಂಗರಾಜ್ ಪಾಟೀಲ (40) ಎಂಬ ಮಹಿಳೆಯ ಶವ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇನ್ನು ಮಹಿಳೆ ಡೆತ್ ನೋಟ್ ಬರೆದು ಅದನ್ನು ತಮ್ಮ ತಂದೆಗೆ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ತಮಗೆ ಹಲವರು ಕಿರುಕುಳ ನೀಡಿದ್ದಾರೆ. ಕುಟುಂಬಕ್ಕೋಸ್ಕರ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ನೋಟ್ನಲ್ಲಿ ಮಹಿಳೆ ಬರೆದಿದ್ದಾರೆಂದು ಗೊತ್ತಾಗಿದೆ. "ಪ್ರಿಯದರ್ಶಿನಿಗೆ ಇಬ್ಬರು ಮಕ್ಕಳಿದ್ದು, ಪತಿ ಜೊತೆ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದರು. ಮಕ್ಕಳು ಆಸ್ಟ್ರೆಲಿಯಾದಲ್ಲಿಯೇ ಜನಿಸಿದ್ದರಿಂದ ಆಸ್ಟ್ರೇಲಿಯಾ ಪೌರತ್ವ ಪಡೆದುಕೊಂಡಿದ್ದು ಅಲ್ಲಿಯೇ ಇದ್ದಾರೆ. ಆದರೆ, ಆಸ್ಟ್ರೇಲಿಯಾದಿಂದ ಇತ್ತೀಚೆಗೆ ಸ್ವದೇಶಕ್ಕೆ ಮರಳಿದ್ದ ಪ್ರಿಯದರ್ಶಿನಿ, ಮನೆಗೂ ಬಂದಿರಲಿಲ್ಲ" ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಪಾಲಿಕೆ ಮಾಜಿ ಮೇಯರ್ ಈರೇಶ ಅಂಚಟಗೇರಿ ಮಾತನಾಡಿದ್ದು, ''ಹಲವು ವರ್ಷಗಳಿಂದ ಪ್ರಿಯದರ್ಶಿನಿ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದರು. ಅವರ ಮಕ್ಕಳು ಸಹ ಅಲ್ಲಿಯೇ ಜನನ ಹೊಂದಿದ್ದರು. ಹೀಗಾಗಿ ಅಲ್ಲಿನ ಪೌರತ್ವ ಹೊಂದಿದ್ದಾರೆ. ಕೆಲ ವರ್ಷಗಳಿಂದ ಅವರ ಮಕ್ಕಳಿಗೆ ಅನಾರೋಗ್ಯ ಕಾಡತೊಡಗಿತ್ತು. ಹಾಗಾಗಿ ಅವರು ನೊಂದುಕೊಂಡಿದ್ದರು. ಆಗಸ್ಟ್ 18ಕ್ಕೆ ಆಸ್ಟ್ರೇಲಿಯಾದಿಂದ ಭಾರತಕ್ಕೆ ಬಂದ ಪ್ರಿಯದರ್ಶಿನಿ, ಬೆಂಗಳೂರಿನಲ್ಲಿ ಒಂದು ದಿನ ಸ್ನೇಹಿತರ ಮನೆಯಲ್ಲಿ ಉಳಿದುಕೊಂಡಿದ್ದರು. ಮರುದಿನ ಧಾರವಾಡಕ್ಕೆ ಹೋಗುವುದಾಗಿ ಹೇಳಿ ಬಸ್ ಹತ್ತಿ ನೇರವಾಗಿ ಗೋಕಾಕ್ಗೆ ಟಿಕೆಟ್ ತೆಗಿಸಿದ್ದರು. ಆದರೆ, ಗೋಕಾಕ್ ಬದಲಿಗೆ ಸವದತ್ತಿಯಲ್ಲಿ ಇಳಿದು ನವಿಲುತೀರ್ಥದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಬಹಳ ನೋವಿನ ಸಂಗತಿ. ಕಾನೂನಿನ ತೊಡಕು ಇರುವುದರಿಂದ ಈ ಬಗ್ಗೆ ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಗಮನಕ್ಕೆ ತರಲಾಗಿದೆ. ಅವರ ಮಕ್ಕಳನ್ನು ಆಸ್ಟ್ರೇಲಿಯಾದಿಂದ ಸ್ವದೇಶಕ್ಕೆ ಕರೆತರಲು ಸರ್ಕಾರ ಸಹಾಯ ಮಾಡಬೇಕು" ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:'ಮದುವೆ ಭರವಸೆ ನೀಡಿ ವಂಚಿಸಿದ ಕಾನ್ಸ್ಟೇಬಲ್': ಮೈಸೂರಿನಲ್ಲಿ ಪೊಲೀಸರಿಗೆ ದೂರು ನೀಡಿದ ವಿದ್ಯಾರ್ಥಿನಿ