ಧಾರವಾಡ:ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದ ಪೈಕಿ ನಾಲ್ಕು ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಗೆ ಬಿದ್ದರೆ ಉಳಿದ 3 ಕ್ಷೇತ್ರಗಳನ್ನು ಬಿಜೆಪಿ ಉಳಿಸಿಕೊಳ್ಳುವಲ್ಲಿ ಸಫಲವಾಗಿದೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಾಗಿ ಹು-ಧಾ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿಯಾಗುತ್ತಿದ್ದಂತೆ ದೇಶದ ಚಿತ್ತ ಈ ಕ್ಷೇತ್ರದತ್ತ ನೆಟ್ಟಿತ್ತು. ಆದರೆ ಚುನಾವಣಾ ಫಲಿತಾಂಶದಲ್ಲಿ ಶೆಟ್ಟರ್ ಅವರು ಬಿಜೆಪಿ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ವಿರುದ್ಧ ಸೋತಿದ್ದಾರೆ.
ನವಲಗುಂದ ಬಿಜೆಪಿ ಅಭ್ಯರ್ಥಿ ಶಂಕರ್ ಪಾಟೀಲ್ ಮುನೇನಕೊಪ್ಪ ಅವರ ವಿರುದ್ಧ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಕೋನರಡ್ಡಿ ಭಾರಿ ಅಂತರದಿಂದ ಗೆಲುವು ಸಾಧಿಸುವ ಮೂಲಕ ಮತ್ತೆ ಶಾಸಕರಾಗಿ ಆಯ್ಕೆಯಾದರೆ, ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಲಾಡ್-ಛಬ್ಬಿ ಪೈಪೋಟಿಯ ನಡುವೆ ಕೈ ಅಭ್ಯರ್ಥಿ ಸಂತೋಷ ಲಾಡ್ ಜಯಭೇರಿ ಬಾರಿಸಿದ್ದಾರೆ.
ಹು-ಧಾ ಪೂರ್ವ ಕ್ಷೇತ್ರದಲ್ಲಿ ಸತತ ಎರಡು ಬಾರಿ ಗೆದ್ದಿರುವ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ಅಬ್ಬಯ್ಯ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿದರು. ಬಿಜೆಪಿ ಅಭ್ಯರ್ಥಿ ಡಾ.ಕ್ರಾಂತಿಕಿರಣ ಅವರ ಹಿಂದೆ ಘಟಾನುಟಿಗಳೇ ಮತಬೇಟೆ ಮಾಡಿದರೂ ಪ್ರಯೋಜನವಾಗಿಲ್ಲ. ಧಾರವಾಡ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ವಿನಯ ಕುಲಕರ್ಣಿ ಧಾರವಾಡ ಕ್ಷೇತ್ರ ಪ್ರವೇಶಿಸದೇ ಗೆದ್ದು ಹೊಸ ದಾಖಲೆ ಬರೆದರು. ಇತ್ತ ತೊಡೆ ತಟ್ಟಿ ಸವಾಲು ಹಾಕಿದ್ದ ಬಿಜೆಪಿ ಅಭ್ಯರ್ಥಿ ಅಮೃತ್ ದೇಸಾಯಿ ಪರಾಭವಗೊಂಡಿದ್ದಾರೆ.
ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ತಮ್ಮದೇ ಪಾರುಪತ್ಯ ಹೊಂದಿರುವ ಬಿಜೆಪಿ ಅಭ್ಯರ್ಥಿ ಅರವಿಂದ್ ಬೆಲ್ಲದ್ ಮತ್ತೊಮ್ಮೆ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ದೀಪಕ್ ಚಿಂಚೋರೆ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ. ತ್ರಿಕೋನ ಸ್ಪರ್ಧೆಗೆ ಸಾಕ್ಷಿಯಾಗಿದ್ದ ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಆರ್.ಪಾಟೀಲ್, ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ವಿರುದ್ಧ ಪಕ್ಷೇತರ ಅಭ್ಯರ್ಥಿ ಎಸ್.ಐ.ಚಿಕ್ಕನಗೌಡ್ರ ಜಯ ಸಾಧಿಸಿದ್ದಾರೆ.