ಧಾರವಾಡ:ಕೃಷಿ ಅಭಿವೃದ್ಧಿಯಾಗದೆ ಭಾರತ ಅಭಿವೃದ್ಧಿ ಹೊಂದಿದ ದೇಶವಾಗದು. ನೈಸರ್ಗಿಕ ಬದಲಾವಣೆಗಳಿಂದಾಗಿ ಭವಿಷ್ಯದಲ್ಲಿ ಕೃಷಿಗೆ ಅನೇಕ ಸವಾಲುಗಳು ಎದುರಾಗುತ್ತವೆ. ಅವುಗಳನ್ನು ಪರಿಹರಿಸಿ, ಅಭಿವೃದ್ಧಿ ಸಾಧಿಸಲು ನೂತನ ಪದವಿಧರರು ಬದ್ಧತೆ ತೋರಬೇಕು ಎಂದು ಭಾರತ ಸರ್ಕಾರದ ಕೃಷಿ ಸಂಶೋಧನೆ ಹಾಗೂ ಶಿಕ್ಷಣ ವಿಭಾಗದ ಕಾರ್ಯದರ್ಶಿ ಹಾಗೂ ಭಾರತೀಯ ಕೃಷಿ ಅನುಸಂದಾನ ಪರಿಷತ್ತಿನ ಮಹಾನಿರ್ದೇಶಕ ಡಾ. ಹಿಮಾಂಶು ಪಾಠಕ್ ಹೇಳಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿದ್ದ 36ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಅವರು ಘಟಿಕೋತ್ಸವ ಭಾಷಣ ಮಾಡಿದರು. "ಸಮಾಜ ಸೇವೆ ಮತ್ತು ಪ್ರಚಲಿತದಲ್ಲಿನ ಪದ್ಧತಿಗಳನ್ನು ಸುಧಾರಿಸಿ, ಕೃಷಿ ಲಾಭದಾಯಕವಾಗಿ ಮಾಡುವುದು ಕೃಷಿ ಶಿಕ್ಷಣದ ಉದ್ದೇಶವಾಗಿದೆ. ನೂತನ ತಂತ್ರಜ್ಞಾನ ಬಳಕೆ ಹೆಚ್ಚಬೇಕು ಮತ್ತು ಪ್ರಾಯೋಗಿಕ ಪಾಠದ ಶಿಕ್ಷಣ ಹೆಚ್ಚು ಪರಿಣಾಮ ಬೀರುತ್ತದೆ" ಎಂದು ಅವರು ತಿಳಿಸಿದರು.
ಕೃಷಿ ವಿಶ್ವವಿದ್ಯಾಲಯದ ಸಾಧನೆ ಹಾಗೂ ಸಂಶೋಧನೆಗಳ ಬಗ್ಗೆ ಮೆಚ್ವುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಪದವಿ ಪಡೆದ ನಂತರ ಕಲಿತ ಶಿಕ್ಷಣ, ಪಡೆದ ಜ್ಞಾನವನ್ನು ಬಳಸಿಕೊಂಡು ತಾವೂ ಬೆಳೆಯಬೇಕು ಮತ್ತು ರಾಷ್ಟ್ರವನ್ನು ಬೆಳೆಸಬೇಕು ಎಂದು ಡಾ. ಹಿಮಾಂಶು ಪಾಠಕ್ ಸಲಹೆ ನೀಡಿದರು.
ಆತ್ಮನಿರ್ಭರ ಭಾರತಕ್ಕೆ ಕೈ ಜೋಡಿಸಬೇಕು:ಘಟಿಕೋತ್ಸವದಲ್ಲಿ ರಾಜ್ಯಪಾಲ ಹಾಗೂ ಕೃಷಿ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರ್ ಚಂದ್ ಗೆಹ್ಲೋಟ್ ಮಾತನಾಡಿ ಕೃಷಿ ಪದವಿಧರರು ಆತ್ಮನಿರ್ಭರ ಭಾರತಕ್ಕೆ ಕೈ ಜೋಡಿಸಬೇಕು. ಕಲಿತ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳಬೇಕು. ಭಾರತ ಕೃಷಿ ಪ್ರಧಾನ ರಾಷ್ಟ್ರ. ದೇಶದ ಅರ್ಥವ್ಯವಸ್ಥೆಗೆ ಕೃಷಿ ಮುಖ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿ, ಕೃಷಿಕರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ವಿಶ್ವಶಾಂತಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಭಾರತ ಮುಂದಾಳತ್ವ ವಹಿಸುತ್ತಿದೆ. ಯುವ ಜನರು ಕೃಷಿಗೆ ಹೆಚ್ಚು ಆದ್ಯತೆ ನೀಡಿ ಶ್ರಮಿಸಬೇಕೆಂದು ರಾಜ್ಯಪಾಲರು ಕರೆ ನೀಡಿದರು.
ಸಂಶೋಧಕರು ರೈತರೊಂದಿಗೆ ನಿಲ್ಲಬೇಕು: ಕೃಷಿ ಸಚಿವ ಮತ್ತು ಕೃಷಿ ವಿಶ್ವವಿದ್ಯಾಲಯದ ಸಹಕುಲಾಧಿಪತಿ ಎನ್. ಚೆಲುವರಾಯಸ್ವಾಮಿ ಮಾತನಾಡಿ "ಧಾರವಾಡ ಕೃಷಿ ವಿಶ್ವವಿದ್ಯಾಲಯ ಶಿಕ್ಷಣ, ಸಂಶೋಧನೆ ಮತ್ತು ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ಕೀರ್ತಿ, ಯಶಸ್ಸು ಗಳಿಸಿದೆ. ಕೃಷಿ ಇಲಾಖೆ, ಕೃಷಿ ವಿವಿ ಮತ್ತು ಸಂಶೋಧಕರು ರೈತರೊಂದಿಗೆ ನಿಲ್ಲಬೇಕು. ಹೊಸ ತಳಿಗಳನ್ನು ಸಂಶೋಧಿಸಿ, ಕೃಷಿ ಲಾಭದಾಯವಾಗುವಂತೆ ಮಾಡಬೇಕು ಎಂದು ಹೇಳಿದರು.
ಪದವಿ ಪಡೆದು ವಿವಿಯಿಂದ ಹೊರ ಬರುತ್ತಿರುವ ಯುವ ಕೃಷಿ ಮಿತ್ರರು, ವಿಜ್ಞಾನಿಗಳು ತಾವು ಕಲಿಕೆಯಲ್ಲಿ ಪಡೆದ ಜ್ಞಾನವನ್ನು ರೈತರ ಜಮೀನುಗಳಲ್ಲಿ, ಕ್ಷೇತ್ರ ಮಟ್ಟದಲ್ಲಿ ಬಳಸಿ, ಬದಲಾವಣೆ ತರಬೇಕು. ಕೃಷಿ ಆಧುನೀಕರಣಗೊಳಿಸಲು ಮತ್ತು ಹೆಚ್ಚು ಲಾಭದಾಯಕಗೊಳಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳ ಮೂಲಕ ಪ್ರೋತ್ಸಾಹ ನೀಡುತ್ತಿವೆ. ರೈತರನ್ನು ಸಶಕ್ತರನ್ನಾಗಿ, ಸುಖಿಗಳನ್ನಾಗಿ ಮಾಡಲು ಪ್ರಾಮುಖ್ಯತೆ ನೀಡಬೇಕು ಎಂದು ಸಚಿವ ಚೆಲುವರಾಯಸ್ವಾಮಿ ಹೇಳಿದರು.