ಕರ್ನಾಟಕ

karnataka

ETV Bharat / state

ಧಾರವಾಡ ಜಿಲ್ಲಾದ್ಯಂತ ಜೂನ್​ 30ರವರೆಗೆ 144 ಸೆಕ್ಷನ್​ ಮುಂದುವರಿಕೆ - ಧಾರವಾಡ ಲೆಟೆಸ್ಟ್ ನ್ಯೂಸ್

ಮಹಾಮಾರಿ ಕೊರೊನಾ ತಡೆಯುವ ನಿಟ್ಟಿನಲ್ಲಿ, ಜೂ.8ರಿಂದ 30ರವರೆಗೆ ಧಾರವಾಡ ಜಿಲ್ಲೆಯಾದ್ಯಂತ ಸಿಆರ್​ಪಿಸಿ 1973ರ ಕಲಂ 144ರನ್ವಯ ನಿಷೇಧಾಜ್ಞೆ ಮುಂದುವರೆಸಿ, ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶಿಸಿದ್ದಾರೆ.

Deepa cholan
Deepa cholan

By

Published : Jun 10, 2020, 3:10 AM IST

ಧಾರವಾಡ: ಕೊರೊನಾ ಹರಡದಂತೆ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಜೂ.8 ರಿಂದ 30ರವರೆಗೆ ಜಿಲ್ಲೆಯಾದ್ಯಂತ ಸಿಆರ್​ಪಿಸಿ 1973ರ ಕಲಂ 144ರನ್ವಯ ನಿಷೇಧಾಜ್ಞೆ ಮುಂದುವರೆಸಿ, ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಸದ್ಯ ಸಂತೆ, ಜಾತ್ರೆ, ಸಮಾವೇಶ, ಮೆರವಣಿಗೆ, ಸಮ್ಮೇಳನ, ಕ್ರೀಡಾಕೂಟ ಹಾಗೂ ಎಲ್ಲಾ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ. 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಿದೆ. ಸಾರ್ವಜನಿಕರು ತುರ್ತು ವೈದ್ಯಕೀಯ ಕಾರ್ಯ ಹೊರತುಪಡಿಸಿ ಅನಗತ್ಯವಾಗಿ ತಿರುಗಾಡದಂತೆ ಸೂಚಿ‌ಸಲಾಗಿದೆ. ಕರ್ಫ್ಯೂ ಅವಧಿಯಲ್ಲಿ ಜಿಲ್ಲೆಯಲ್ಲಿನ ಮದುವೆ ಕಾರ್ಯಕ್ರಮದಲ್ಲಿ ಕೇವಲ 50 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಶವ ಸಂಸ್ಕಾರ ಕಾರ್ಯದಲ್ಲಿ ಕೇವಲ 20 ಜನರಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ.

ಶಿಕ್ಷಣ, ತರಬೇತಿ, ಕೋಚಿಂಗ್ ಸಂಸ್ಥೆಗಳು, ಹೋಟೆಲ್ ರೆಸ್ಟೋರೆಂಟ್, ಬಾರ್ ಸೇರಿದಂತೆ ಆತಿಥ್ಯ ಸೇವೆಗಳೆಲ್ಲವನ್ನು ನಿರ್ಬಂಧಿಸಲಾಗಿದೆ. ಆದರೆ ಆನ್‍ಲೈನ್ ಕ್ಲಾಸ್‍ಗಳು ಹಾಗೂ ದೂರ ಸಂವೇದಿ ಕಲಿಕೆಗೆ ಇದು ಅನ್ವಯಿಸುವುದಿಲ್ಲ. ಎಲ್ಲಾ ಸಾಮಾಜಿಕ ರಾಜಕೀಯ ಶೈಕ್ಷಣಿಕ ಸಾಂಸ್ಕೃತಿಕ ಧಾರ್ಮಿಕ ಹಾಗೂ ಕ್ರೀಡಾ ಚಟುವಟಿಕೆಗಳು ಜರುಗುವುದನ್ನು ನಿಷೇಧಿಸಿದೆ. ಸರ್ಕಾರಿ ವಾಹನಗಳಿಗೆ ಮತ್ತು ಕೋವಿಡ್-19 ಕಾರ್ಯಾಚರಣೆಯಲ್ಲಿ ಕರ್ತವ್ಯನಿರತ ಸಿಬ್ಬಂದಿ ಮತ್ತು ವಾಹನಗಳಿಗೆ ಈ ಆದೇಶ ಅನ್ವಯಿಸುವುದಿಲ್ಲ. ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಸಾರ್ವಜನಿಕ ತುರ್ತು ವೈದ್ಯಕೀಯ ಕಾರ್ಯ ಹೊರತುಪಡಿಸಿ ಅನಗತ್ಯವಾಗಿ ತಿರುಗಾಡುವುದನ್ನು ನಿಷೇಧಿಸಲಾಗಿದೆ.

ಭಾರತ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ ನವದೆಹಲಿ ಇವರು ದೇವಸ್ಥಾನ, ಮಸೀದಿ, ಚರ್ಚ್‌ ಗಳನ್ನು ತೆರೆಯುವುದಕ್ಕೆ ಸಂಬಂಧಿಸಿ ಕೆಲವೊಂದು ನಿರ್ದೇಶನಗಳನ್ನು ನೀಡಿದ್ದಾರೆ. ಅದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಡಿಸಿ ತಿಳಿಸಿದ್ದಾರೆ.

ಹೋಟೆಲ್, ರೆಸ್ಟೋರೆಂಟ್ ತೆರೆಯುವುದಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕೆಂದು ಆದೇಶದಲ್ಲಿ ತಿಳಿಸಿದ್ದಾರೆ. ಆದೇಶ ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ರೋಗಗಳ ತಡೆ ಕಾಯ್ದೆ 1897, ಕರ್ನಾಟಕ ಸಾಂಕ್ರಾಮಿಕ ರೋಗಗಳ (ಕೋವಿಡ್) ನಿಯಂತ್ರಣ ಕಾಯ್ದೆ-2020 ಹಾಗೂ ಭಾರತೀಯ ದಂಡ ಸಂಹಿತೆ ಕಲಂ 188ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details