ಧಾರವಾಡ: ಜಿಲ್ಲೆಯ ನವಲಗುಂದ ಭಾಗದ ಬೆಣ್ಣೆ ಹಳ್ಳ ಕೂಡ ರಾಜಕೀಯ ಅಸ್ತ್ರವಾಗಿ ಬಿಟ್ಟಿದೆ. ಧಾರವಾಡ ಜಿಲ್ಲೆಯಲ್ಲಿ ರೈತರ ಮನ ಗೆಲ್ಲಬೇಕಾದರೆ ಹೇಳುವ ಎರಡು ಮಾತುಗಳೆಂದರೆ, ಒಂದು ಮಹದಾಯಿ, ಇನ್ನೊಂದು ಬೆಣ್ಣೆ ಹಳ್ಳ. ಬೆಣ್ಣೆ ಹಳ್ಳ ಪ್ರವಾಹ ನಿಯಂತ್ರಣದ ಬಗ್ಗೆ ಎಲ್ಲರೂ ಹೇಳುತ್ತಲೇ ಬರುತ್ತಾರೆ. ಆದರೆ ಕಾಮಗಾರಿ ಮಾತ್ರ ಆಗಿಲ್ಲ. ಈಗ ಸಿಎಂ ಆಗಿರುವ ಸಿದ್ದರಾಮಯ್ಯ ಸಹ ಅದೇ ಬೆಣ್ಣೆ ಹಳ್ಳದ ಮಾತು ಹೇಳಿದ್ದಾರೆ.
ಜಿಲ್ಲೆಯಲ್ಲಿ ಒಂದೇ ಒಂದು ನದಿ ಇಲ್ಲ. ಆದರೆ ನವಲಗುಂದ ತಾಲೂಕಿನಲ್ಲಿ ಹಾದು ಹೋಗುವ ಬೆಣ್ಣೆ ಹಳ್ಳ ಯಾವ ನದಿಗೂ ಕಮ್ಮಿ ಇಲ್ಲದಂತೆ ಹರಿದು ಪ್ರವಾಹ ಸೃಷ್ಟಿಸುತ್ತದೆ. ರೈತ ಸಮುದಾಯಕ್ಕೆ ಈ ಹಳ್ಳದಿಂದ ಉಪಯೋಗಕ್ಕಿಂತ ಸಮಸ್ಯೆಯೇ ಹೆಚ್ಚು. ಬೇರೆ ಕಡೆ ಆಗುವ ಮಳೆಯಿಂದ ಈ ಹಳ್ಳ ನವಲಗುಂದ ತಾಲೂಕಿನಲ್ಲಿ ಉಕ್ಕಿ ಹರಿಯುತ್ತದೆ. ಇದರ ಪ್ರವಾಹಕ್ಕೆ ಹಳ್ಳದ ಅಕ್ಕಪಕ್ಕದ ಬೆಳೆಗಳು ಹಾಳಾಗಿ ಹೋಗುತ್ತದೆ. ಎಷ್ಟೋ ಗ್ರಾಮಗಳಿಗೂ ನುಗ್ಗಿ, ಜನರ ಬದುಕನ್ನೇ ಕಸಿದುಕೊಳ್ಳುತ್ತದೆ.
ಇಂಥ ಹಳ್ಳದ ಎರಡು ಬದಿಗೆ ತಡೆಗೋಡೆ ನಿರ್ಮಾಣ ಮಾಡಬೇಕು ಎಂಬುದು ಹಲವು ದಶಕಗಳ ಹಿಂದಿನ ಬೇಡಿಕೆಯಾಗಿದೆ. ಆದರೆ ಯಾವ ಸರ್ಕಾರವೇ ಬರಲಿ ಈ ಬಗ್ಗೆ ಗಮನವನ್ನೇ ಹರಿಸಿರಲಿಲ್ಲ. ಈ ಬಾರಿ ಭಾರಿ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರದಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯತ್ನ ನಡೆಯುತ್ತಿದೆ. ನಾವು ಮಾಡಿಯೇ ಮಾಡುತ್ತೇವೆ ಎಂದು ಧಾರವಾಡ ಕೃಷಿ ಮೇಳ ಉದ್ಘಾಟನೆಯಲ್ಲಿ ಸಿಎಂ ಭರವಸೆ ನೀಡಿದ್ದಾರೆ.