ಹುಬ್ಬಳ್ಳಿ:ಜೀವ ಬಲಿಗಾಗಿ ಕಾದು ಕುಳಿತ ಮಹಾನಗರ ಪಾಲಿಕೆ ಕಟ್ಟಡವನ್ನು ಅಧಿಕಾರಿಗಳು ಕೊನೆಗೂ ನೆಲಸಮ ಮಾಡಿದ್ದಾರೆ.
ನಗರದ ಮ್ಯಾಗೇರ ಓಣಿಯಲ್ಲಿ ಕಳೆದ 50-60 ವರ್ಷಗಳ ಹಿಂದೆ ಮಹಾನಗರ ಪಾಲಿಕೆಯವರು ವಾಣಿಜ್ಯ ಮಳಿಗೆಯನ್ನ ಕಟ್ಟಿದ್ದರು. ಈ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ನೆಲಕ್ಕುರುಳುವ ಸ್ಥಿತಿಗೆ ತಲುಪಿದ್ದು, ಈ ಕಟ್ಟಡ ದುಸ್ಥಿತಿ ಕಂಡು ಜನರು ಆತಂಕಕ್ಕೆ ಒಳಗಾಗಿದ್ದಾರೆ ಎಂಬ ವರದಿಯನ್ನು ಈಟಿವಿ ಭಾರತ್ಪ್ರಕಟಿಸಿತ್ತು. ಈ ವರದಿಗೆ ಈಗ ಫಲಶೃತಿ ಸಿಕ್ಕಿದ್ದು ವರದಿಯಿಂದ ಎಚ್ಚೆತ್ತುಕೊಂಡಿರುವ ಪಾಲಿಕೆ ಅಧಿಕಾರಿಗಳು ಕಟ್ಟಡ ನೆಲಸಮ ಮಾಡುತ್ತಿದ್ದಾರೆ.
ಈ ಕಟ್ಟಡ ಸಂಪೂರ್ಣವಾಗಿ ಹಾಳಾಗಿತ್ತು. ಎಲ್ಲೆಂದರಲ್ಲಿ ಕಟ್ಟಡ ಬಿರುಕು ಬಿಟ್ಟಿದ್ದು, ಕೆಲವು ಭಾಗದಲ್ಲಿ ಕಟ್ಟಡದ ಮೇಲ್ಚಾವಣಿಯು ಕುಸಿದು ಬಿದ್ದಿತ್ತು. 20ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳು ಈ ಕಟ್ಟಡದಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದವು. ಜನನಿಬಿಡ ಪ್ರದೇಶವಾಗಿದ್ದು, ಸಾವಿರಾರು ಜನರು ದಿನನಿತ್ಯ ಇಲ್ಲಿ ಓಡಾಡುತ್ತಿದ್ದರು. ಯಾವಾಗ ಬೇಕಾದ್ರು ಕುಸಿದು ಬೀಳುವ ಹಂತದಲ್ಲಿರುವ ಈ ಕಟ್ಟಡವನ್ನು ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದರು.
ಕೊನೆಗೂ ಕಟ್ಟಡ ತೆರವುಗೊಳಿಸಿರುವ ಪಾಲಿಕೆ ಕ್ರಮವನ್ನು ಸ್ಥಳೀಯರು ಸ್ವಾಗತಿಸಿದ್ದು, ಈ ಟಿವಿ ಭಾರತ ವರದಿಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.