ಧಾರವಾಡ: ಆಸ್ಟ್ರೇಲಿಯಾದ ಅನಿವಾಸಿ ಭಾರತೀಯ ಮಹಿಳೆ (ಎನ್‌ಆರ್‌ಐ) ಪ್ರಿಯದರ್ಶಿನಿ ಪಾಟೀಲ ಆತ್ಮಹತ್ಯೆ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ವಿಷಯವನ್ನು ಜಿ-20 ಶೃಂಗಸಭೆಯಲ್ಲಿ ಚರ್ಚಿಸಬೇಕೆಂದು ಸಿಪಿಎಂ ನಾಯಕಿ ಬೃಂದಾ ಕಾರಟ್ ಒತ್ತಾಯಿಸಿದ್ದಾರೆ.
ಪ್ರಿಯದರ್ಶಿನಿ ಕುಟುಂಬ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲೆಸಿತ್ತು. ಅಲ್ಲಿನ ಸರ್ಕಾರದ ಸುಪರ್ದಿಯಲ್ಲಿರುವ ಮಕ್ಕಳನ್ನು ತಮಗೆ ನೀಡದ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದು ಪ್ರಿಯದರ್ಶಿನಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಪ್ರಕರಣವೀಗ ಅನಿವಾಸಿ ಭಾರತೀಯರ ಮಕ್ಕಳ ರಕ್ಷಣೆಯ ಆಂದೋಲನಕ್ಕೆ ಕಾರಣವಾಗಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮಕ್ಕಳ ಪಾಲನೆಯ ಕುರಿತು ಕಠಿಣ ಕಾನೂನುಗಳಿವೆ. ಇದರಿಂದಾಗಿ ಎನ್ಆರ್ಐಗಳ ಮಕ್ಕಳು ವಿವಿಧ ದೇಶಗಳಲ್ಲಿಯೇ ಉಳಿಯುವಂತಾಗಿದೆ. ಆಯಾ ದೇಶದ ಸರ್ಕಾರದ ಸುಪರ್ದಿಯಲ್ಲಿರೋುವ ಮಕ್ಕಳ ರಕ್ಷಣೆಗಾಗಿ ದೆಹಲಿಯ ಜಂತರ್ ಮಂತರ್ ಎದುರು ಆಂದೋಲನ ನಡೆದಿದೆ.
ಈ ಆಂದೋಲನ ಬೆಂಬಲಿಸಿರುವ ಬೃಂದಾ ಕಾರಟ್ ವಿಡಿಯೋ ಸಂದೇಶದಲ್ಲಿ ಮಾತನಾಡಿ, "ಆಸ್ಟ್ರೇಲಿಯಾದ ವ್ಯವಸ್ಥೆಯು ತನ್ನ ಮಕ್ಕಳನ್ನು ಕಿತ್ತುಕೊಂಡಿದ್ದರಿಂದ ಪ್ರಿಯದರ್ಶಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇವರ ಸಾವು ಆಸ್ಟ್ರೇಲಿಯಾದ ಸಂವೇದನಾರಹಿತತೆಗೆ ಮತ್ತು ಸಾಂಸ್ಕೃತಿಕವಾಗಿ ಪಕ್ಷಪಾತದ ಮಕ್ಕಳ ಸೇವಾ ವ್ಯವಸ್ಥೆಗಳೊಂದಿಗೆ ನೇರ ಸಂಬಂಧ ಹೊಂದಿದೆ. ಆಸ್ಟ್ರೇಲಿಯಾದಲ್ಲಿ ಮಾತ್ರವಲ್ಲ, ಪ್ರಜಾಪ್ರಭುತ್ವ ದೇಶಗಳೆಂದು ಹೇಳಿಕೊಳ್ಳುವ ಅನೇಕ ಪಾಶ್ಚಿಮಾತ್ಯ ದೇಶಗಳಲ್ಲಿ ಅವರ ಪ್ರಜಾಪ್ರಭುತ್ವವು ತಮ್ಮದೇ ಆದ ವಸಾಹತುಶಾಹಿ ಮನಸ್ಥಿತಿ ಹೊರತುಪಡಿಸಿ ಇತರೆ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳಲು ಅಥವಾ ಸಂವೇದನಾಶೀಲವಾಗಿರಲು ಸಾಧ್ಯವಾಗಿಲ್ಲ ಎಂದು ನಾನು ಹೇಳುತ್ತೇನೆ. ಐರ್ಲೆಂಡ್, ಇಂಗ್ಲೆಂಡ್ ಮತ್ತು ಈಗ ಆಸ್ಟ್ರೇಲಿಯಾದಲ್ಲಿನ ಇಂತಹ ಪ್ರಕರಣಗಳು ನಡೆದಿವೆ. ದೇಶದಲ್ಲಿ ಜಿ20 ಸಭೆ ನಡೆಯುತ್ತಿರುವ ಸಮಯದಲ್ಲಿ ನಾವು ಜಿ20 ಅನ್ನು ಒಂದು ಅವಕಾಶವೆಂದು ಭಾವಿಸಿ ಸರ್ಕಾರಗಳೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಬೇಕು" ಎಂದರು.