ಹುಬ್ಬಳ್ಳಿ:ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಮ್ಮನ್ನಗಲಿ ಬರೋಬ್ಬರಿ ಹತ್ತು ತಿಂಗಳೇ ಕಳೆದಿವೆ. ಆದರೆ, ಅವರ ಮೇಲಿನ ಅಭಿಮಾನ ಗೌರವ ಮಾತ್ರ ದಿನ ಕಳೆದಂತೆ ಹೆಚ್ಚಾಗುತ್ತಾಲೇ ಇದೆ. ಅದಕ್ಕೆ ತಾಜಾ ಉದಾಹರಣೆ ಅಂದರೆ ಗಣೇಶ ವಿಗ್ರಹದಲ್ಲೂ ಅಪ್ಪು ರಾರಾಜಿಸುತ್ತಿದ್ದಾರೆ.
ಅಪ್ಪು ಅಮರ.. ಹೌದು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ನೆನಪು ಸದಾ ಒಂದಿಲ್ಲೊಂದು ಕಾರಣದಿಂದ ಮತ್ತೆ ಮತ್ತೆ ನೆನಪಾಗುತ್ತಲೇ ಇದೆ. ಅವರ ಮನೋಜ್ಞ ಅಭಿನಯ, ಅನಾಥರ ಮೇಲೆ ಹೊಂದಿದ್ದ ಮಮತೆಯಿಂದ ಕರುನಾಡ ಮನೆ-ಮನೆಗಳಲ್ಲಿ ಇನ್ನೂ ಅಚ್ಚಳಿಯದೇ ಉಳಿದಿದ್ದಾರೆ. ಅವರ ವಿಶಿಷ್ಟ ಅಭಿನಯ ಕುಟುಂಬ ಸಮೇತ ನೋಡುವ ಚಿತ್ರಗಳು ಈಗಲೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿವೆ.
ಪ್ರತಿ ಹಬ್ಬ, ಜಾತ್ರೆ ಸಮಾರಂಭಗಳಲ್ಲಿ ಪುನೀತ್ ರಾಜ್‍ಕುಮಾರ್ ಈಗಲೂ ರಾರಾಜಿಸುತ್ತಿದ್ದಾರೆ. ರಾಜಧಾನಿ ಬೆಂಗಳೂರಿನ ಲಾಲ್ ಬಾಗ್ನಲ್ಲಿ ಪುಷ್ಪಗಳ ಮೂಲಕ ಪುನೀತ್ ರಾಜ್‍ಕುಮಾರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರೆ, ಇತ್ತ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅವರ ಗಣೇಶ್ ಮೂರ್ತಿಗಳಿಗೆ ಭಾರಿ ಬೇಡಿಕೆ ಬರುತ್ತಿದೆ.
ಗಣೇಶನ ಅವತಾರ ಎತ್ತಿದ ಪುನೀತ್ ರಾಜಕುಮಾರ್: ಅಪ್ಪು ಗಣೇಶ ಮೂರ್ತಿಗಳಿಗೆ ಭಾರಿ ಬೇಡಿಕೆ ಹುಬ್ಬಳ್ಳಿಯ ಬೊಮ್ಮಾಪುರ ಓಣಿಯ ಮಣ್ಣಿನ ಗಣೇಶನ ಪ್ರತಿಮೆಯ ಕಲಾವಿದ ವಿಜಯ್ ಕುಮಾರ್ ಕಾಂಬಳೆ ಮತ್ತು ಅವರ ಪುತ್ರ ರಿತೇಶ್ ಕಾಂಬಳೆ ಪುನೀತ್ ರಾಜ್ಕುಮಾರ್ ಅವರ ಗಣಪತಿ ವಿಗ್ರಹಗಳನ್ನು ತಯಾರಿಸುವುದರ ಮೂಲಕ ಅವರಿಗೆ ಶ್ರದ್ಧಾಂಜಲಿ ಹಾಗೂ ಗೌರವ ಸಲ್ಲಿಸುತ್ತಿದ್ದಾರೆ.
ಅಪ್ಪುಗೆ ಗಣೇಶ ಮೂರ್ತಿ ಮೂಲಕ ಶ್ರದ್ಧಾಂಜಲಿ.. ಗಣೇಶ ಹಬ್ಬಕ್ಕೆ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಕಲಾವಿದರು ವಿವಿಧ ಮಾದರಿಯ ಮೂರ್ತಿ ತಯಾರಿಕೆಯಲ್ಲಿ ತೊಡಗಿದ್ದಾರೆ. ವಿಜಯ ಕುಮಾರ ಕಾಂಬಳೆ ಕೂಡ ತಮ್ಮ ಗಣೇಶ ಮೂರ್ತಿಗಳ ಜೊತೆಗೆ ಅಪ್ಪು ಮೂರ್ತಿಯನ್ನ ತಯಾರಿಸುವ ಮೂಲಕ ಕಲೆ ಮೂಲಕವೇ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಅಭಿಮಾನಿಯಿಂದ ಬಂದ ಬೇಡಿಕೆ.. ಮೊದಲಿಗೆ ಪುನೀತ್ ಅಭಿಮಾನಿಯೊಬ್ಬರು ಇಂತಹದೊಂದು ವಿಶೇಷ ವಿಗ್ರಹಕ್ಕೆ ಬೇಡಿಕೆಯಿಟ್ಟಿದ್ದರು. ಗಣೇಶ ಹಾಗೂ ಅಪ್ಪು ಇರುವ ವಿಗ್ರಹ ಮಾಡಿಸಿದ್ದರು. ಆದರೆ, ಸದ್ಯ ಅದನ್ನು ನೋಡಿದ ಜನರು, ಅಪ್ಪು ಇರುವ ಗಣೇಶ ವಿಗ್ರಹಕ್ಕೆ ಬೇಡಿಯಿಡುತ್ತಿದ್ದಾರೆ. ಇಲ್ಲಿಯವರೆಗೂ ನೂರಾರು ಜನ ಆರ್ಡರ್ ಮಾಡಿದ್ದು. ಈ ವಿಗ್ರಹಗಳ ಮೂಲಕ ನಾವು ನಟನಿಗೆ ಗೌರವ ಸಲ್ಲಿಸುತ್ತೇವೆ ಎನ್ನುತ್ತಾರೆ ವಿಜಯ್ ಕುಮಾರ್ ಕಾಂಬಳೆ.
ಆರಂಭದಲ್ಲಿ ಪುನೀತ್ ಜೊತೆ ಸೇರಿ 10 ಗಣೇಶ ಮೂರ್ತಿಗಳನ್ನು ತಯಾರಿಸಿದ್ದೆವು. ಬೇಡಿಕೆಗೆ ತಕ್ಕಂತೆ ಹಬ್ಬದ ಕೊನೆಯ ಕ್ಷಣದ ವೇಳೆಗೆ ಅವುಗಳನ್ನು ಇನ್ನಷ್ಟು ತಯಾರಿಸುತ್ತೇವೆ. ಪುನೀತ್ ರಾಜ್ಕುಮಾರ್ ಅವರ ಅಭಿಮಾನಿಗಳು ಈ ಬಾರಿಯ ಹಬ್ಬಕ್ಕೆ ಅಂತಹ ವಿಗ್ರಹವನ್ನು ಹೊಂದಲು ಬಯಸುತ್ತಾರೆ. ಬೇಡಿಕೆ ಕೂಡ ಹೆಚ್ಚಾಗಿದೆ ಎಂದು ಕಲಾವಿದರು ಹೇಳಿದರು.
ಇದನ್ನೂ ಓದಿ:ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿಗೆ ಅವಕಾಶ ಕೋರಿ ಪ್ರತಿಭಟನೆ