ಕರ್ನಾಟಕ

karnataka

ETV Bharat / state

ಕರ್ನಾಟಕದಲ್ಲೂ ಖಾತೆ ತೆರೆಯಲು ಕೇಜ್ರಿವಾಲ್​ ಪ್ಲಾನ್‌.. ಹುಬ್ಬಳ್ಳಿಯಲ್ಲಿಂದು ಟಿಕೆಟ್​ ಆಕಾಂಕ್ಷಿಗಳೊಂದಿಗೆ ಚರ್ಚೆ - ಆಮ್‌ ಆದ್ಮಿ ಪಕ್ಷ

ವಿಧಾನಸಭೆ ಚುನಾವಣೆ 2023- ಕರ್ನಾಟಕದಲ್ಲಿ ಆಪ್​ ಖಾತೆ ತೆರೆಯಲು ಕೇಜ್ರಿವಾಲ್​ ಪ್ಲಾನ್​ - ದಾವಣಗೆರೆಯಲ್ಲಿಂದು ಬಹಿರಂಗ ಸಭೆ

Delhi CM Arvind Kejriwal comes to hubballi
ಹುಬ್ಬಳ್ಳಿಗೆ ಬಂದಿಳಿದ ಕೇಜ್ರಿವಾಲ್‌

By

Published : Mar 4, 2023, 8:01 AM IST

Updated : Mar 4, 2023, 9:43 AM IST

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್​, ಜಾತ್ಯತೀತ ಜನತಾ ದಳ(ಜೆಡಿಎಸ್​) ಮತ್ತು ಭಾರತೀಯ ಜನತಾ ಪಕ್ಷದ ಯಾತ್ರೆಗಳು ಚುರುಕು ಪಡೆದಿವೆ. ಈಗಾಗಲೇ ಜೆಡಿಎಸ್​ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಹ ಬಿಡುಗಡೆ ಮಾಡಿದೆ. ಮತ್ತೊಂದೆಡೆ ಬಿಜೆಪಿ ಮತ್ತು ಕಾಂಗ್ರೆಸ್​ನಲ್ಲಿ ಟಿಕೆಟ್​ಗಾಗಿ ಪೈಪೋಟಿ ಜೋರಾಗಿದೆ. ಈ ನಡುವೆ ದೆಹಲಿ ಮತ್ತು ಪಂಜಾಬ್​ನಲ್ಲಿ ಆಡಳಿತ ನಡೆಸುತ್ತಿರುವ ಆಮ್​ ಆದ್ಮಿ ಪಕ್ಷ ಕರ್ನಾಟಕದಲ್ಲೂ ಈ ಬಾರಿ ಅಖಾಡಕ್ಕಿಳಿಯಲು ಸಜ್ಜಾಗಿದೆ. ಈ ನಿಟ್ಟಿನಲ್ಲಿ ದೆಹಲಿ ಮತ್ತು ಪಂಜಾಬ್​ ಮುಖ್ಯಮಂತ್ರಿಗಳು ರಾಜ್ಯಕ್ಕೆ ಆಗಮಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಅದ್ಧೂರಿ ಸ್ವಾಗತ.. ಕರ್ನಾಟಕದಲ್ಲಿಯೂ ಆಮ್‌ ಆದ್ಮಿ ಪಕ್ಷ ಖಾತೆ ತೆರೆಯಲು ಪ್ರಯತ್ನ ಮುಂದುವರೆಸಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಪಕ್ಷ ಸಂಘಟನೆಗೆ ಆಪ್ ಪ್ಲಾನ್ ರೂಪಿಸಿದೆ. ಹೀಗಾಗಿ ಶುಕ್ರವಾರ ತಡರಾತ್ರಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌, ಪಂಜಾಬ್​ ಸಿಎಂ ಭಗವಂತ ಮಾನ್ ಬಂದಿಳಿದಿದ್ದಾರೆ. ಇದೇ ಮೊದಲ ಬಾರಿಗೆ ವಾಣಿಜ್ಯ ನಗರಿಗೆ ಆಗಮಿಸಿದ ಆಮ್​ ಆದ್ಮಿ ಪಕ್ಷದ ನಾಯಕರಿಗೆ ಅದ್ಧೂರಿಯಾಗಿ ಸ್ವಾಗತ ಕೋರಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮತ್ತು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ಬೆ. 10 ಗಂಟೆಗೆ ಹುಬ್ಬಳ್ಳಿಯಿಂದ ದಾವಣಗೆರೆಗೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಲಿದ್ದಾರೆ.

ಈ ಬಾರಿಯ ಚುನಾವಣೆಯ ಟಾರ್ಗೆಟ್​.. 2023 ರ ವಿಧಾನಸಭಾ ಚುನಾವಣೆಯನ್ನು ಆಪ್ ಪ್ರತಿಷ್ಠೆಯಾಗಿ ತೆಗೆದುಕೊಂಡಿದೆ. ಸಾರ್ವತ್ರಿಕ ಚುನಾವಣೆಯನ್ನ ಗಮನದಲ್ಲಿಟ್ಟುಕೊಂಡು ರಾಜ್ಯಕ್ಕೆ ಅರವಿಂದ ಕೇಜ್ರಿವಾಲ್ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಕರ್ನಾಟಕದ ಮಧ್ಯ ಭಾಗದಿಂದಲೇ ಪಕ್ಷ ಸಂಘಟನೆಗೆ ‌ಅರವಿಂದ ಕೇಜ್ರಿವಾಲ್ ಮುಂದಾಗಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ಬ್ಲಾಕ್ ಸದಸ್ಯರ ಪ್ರಮಾಣ ವಚನದ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಅವರು, ಕಾರ್ಯಕ್ರಮದಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆ ಇದೆ.

ಹುಬ್ಬಳ್ಳಿಯಲ್ಲಿ ಟಿಕೆಟ್​ ಆಕಾಂಕ್ಷಿಗಳೊಂದಿಗೆ ಕೇಜ್ರಿವಾಲ್​ ಚರ್ಚೆ..ದಾವಣಗೆರೆ ಕಾರ್ಯಕ್ರಮಕ್ಕೂ ಮುಂಚೆ ಹುಬ್ಬಳ್ಳಿಯಲ್ಲಿ ಸಭೆ ನಡೆಸಲಿರುವ ಕೇಜ್ರಿವಾಲ್‌ ಪಕ್ಷದ ಮುಖಂಡರು ಮತ್ತು ಟಿಕೆಟ್ ಆಕಾಂಕ್ಷಿಗಳ ಜೊತೆಗೆ ಖಾಸಗಿ ಹೋಟೆಲ್‌ನಲ್ಲಿ ಚರ್ಚೆ ನಡೆಸಲಿದ್ದಾರೆ. ಈ ಮೂಲಕ ಕರ್ನಾಟಕದಲ್ಲಿ ಖಾತೆ ಓಪನ್ ಮಾಡಲು ಮಾಸ್ಟರ್ ಪ್ಲಾನ್‌ ಮಾಡಿದ್ದು, ಮುಂಬರುವ ಚುನಾವಣೆಯಲ್ಲಿ 224 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಅಖಾಡಕ್ಕೆ ಇಳಿಸಲು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ದಾವಣಗೆರೆಯಲ್ಲಿಂದು ಆಪ್​ ಬಹಿರಂಗ ಸಭೆ.. ಬೆಳಗ್ಗೆ ಹುಬ್ಬಳ್ಳಿಯಲ್ಲಿ ಟಿಕೆಟ್​ ಆಕಾಂಕ್ಷಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಕೇಜ್ರಿವಾಲ್​ ಮತ್ತು ಭಗವಂತ್ ಮಾನ್​ ಅವರು ದಾವಣಗೆರೆಗೆ ತೆರಳಲಿದ್ದಾರೆ. ಅಲ್ಲಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿರುವ ಆಮ್ ಆದ್ಮಿ ಪಕ್ಷದ ಬಹಿರಂಗ ಸಭೆಯಲ್ಲಿ ಅವರು ಭಾಗಿಯಾಗಲಿದ್ದಾರೆ. ಆಮ್ ಆದ್ಮಿ ಪಕ್ಷ ರಾಷ್ಟ್ರೀಯ ಪಕ್ಷವಾಗಿದ್ದು, ದೆಹಲಿ ಹಾಗೂ ಪಂಜಾಬ್​ನಲ್ಲಿ ಆಡಳಿತ ನಡೆಸುತ್ತಿರುವ ಪಕ್ಷವಾಗಿದೆ. ಶನಿವಾರ ದೆಹಲಿ ಸಿಎಂ ಕೇಜ್ರಿವಾಲ್ ಹಾಗೂ ಪಂಜಾಬ್ ಸಿಎಂ ಭಗವಂತ್ ಮಾನ್ ಬೆಣ್ಣೆ ನಗರಿಗೆ ಆಗಮಿಸುತ್ತಿದ್ದು, ಚುನಾವಣೆಯ ರಣಕಹಳೆ ಮೊಳಗಿಸಲಿದ್ದಾರೆ ಎಂದು ಆಪ್ ಪಕ್ಷದ ಮುಖಂಡ ಮುಖ್ಯಮಂತ್ರಿ ಚಂದ್ರು ಶುಕ್ರವಾರ ಮಾಹಿತಿ ನೀಡಿದ್ದರು.

ಇದನ್ನೂ ಓದಿ.. ದಾವಣಗೆರೆಯಲ್ಲಿ ಕೇಜ್ರಿವಾಲ್ ಚುನಾವಣೆ ರಣಕಹಳೆ ಮೊಳಗಿಸಲಿದ್ದಾರೆ: ಮುಖ್ಯಮಂತ್ರಿ ಚಂದ್ರು

Last Updated : Mar 4, 2023, 9:43 AM IST

ABOUT THE AUTHOR

...view details