ಧಾರವಾಡ: ಸೈನಿಕರು ಮತ್ತು ಅವಲಂಬಿತ ಕುಟುಂಬಗಳ ಕಲ್ಯಾಣಕ್ಕಾಗಿ ಪ್ರತಿವರ್ಷ ಡಿಸೆಂಬರ್ 7 ರಂದು ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಆಚರಿಸಲಾಗುತ್ತಿದೆ. ಹೀಗಾಗಿ ಪ್ರತಿಯೊಬ್ಬ ನಾಗರಿಕನೂ ಧ್ವಜಗಳನ್ನು ಖರೀದಿಸಿ ಸೈನಿಕರ ಕಲ್ಯಾಣ ನಿಧಿಗೆ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಧ್ವಜಗಳನ್ನು ಖರೀದಿಸಿ ಸೈನಿಕರಿಗೆ ನೆರವಾಗುವಂತೆ ದೀಪಾ ಚೋಳನ್ ಮನವಿ
ಧಾರವಾಡದಲ್ಲಿ ನಡೆದ ಧ್ವಜ ದಿನಾಚರಣೆಯಂದು ಪ್ರತಿಯೊಬ್ಬ ನಾಗರಿಕನೂ ಧ್ವಜಗಳನ್ನು ಖರೀದಿಸಿ ಸೈನಿಕರ ಕಲ್ಯಾಣ ನಿಧಿಗೆ ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಕರೆ ಕೊಟ್ಟರು.
ಜಿಲ್ಲಾಡಳಿತ ಹಾಗೂ ಸೈನಿಕ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಶಸ್ತ್ರ ಪಡೆಗಳ ಧ್ವಜದ ಚಿತ್ರಗಳು ಮತ್ತು ಸ್ಟಿಕರ್ಗಳನ್ನು ಅವರು ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ ದೇಶದ ರಕ್ಷಣೆಗಾಗಿ ಜೀವ ಪಣಕ್ಕಿಟ್ಟು ಹೋರಾಡುವ ಸೈನಿಕರಿಗೆ ಆತ್ಮಸ್ಥೈರ್ಯ ತುಂಬಲು ದೇಶದ ಎಲ್ಲಾ ನಾಗರಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿಕೊಂಡರು.
ಇದೇ ವೇಳೆ ನಿವೃತ್ತ ಏರ್ ಕಮಾಂಡರ್ ಸಿ. ಎಸ್. ಹವಾಲ್ದಾರ್ ಮಾತನಾಡಿ, ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ದೊರೆತ ಕೂಡಲೇ, ದೇಶದ ರಕ್ಷಣಾ ಪಡೆಗಳ ಸೈನಿಕರ ಕಲ್ಯಾಣಕ್ಕಾಗಿ ಈ ಆಚರಣೆ ಜಾರಿಗೆ ಬಂತು. ಭಾರತದ ಮೊದಲ ರಕ್ಷಣಾ ಸಚಿವ ಬಲದೇವ ಸಿಂಗ್ ನೇತೃತ್ವದಲ್ಲಿ ಅಂದಿನ ಪ್ರಧಾನ ಮಂತ್ರಿ ಜವಹರಲಾಲ್ ನೆಹರು 1949 ಡಿಸೆಂಬರ್ 7 ರಿಂದ ಈ ಆಚರಣೆ ಜಾರಿಗೊಳಿಸಿದರು ಎಂಬ ಕುರಿತು ಮಾಹಿತಿ ನೀಡಿದರು.