ಹುಬ್ಬಳ್ಳಿ:ಅವಳಿ ನಗರವನ್ನು ಸ್ಮಾರ್ಟ್ ಮಾಡುವ ಕೇಂದ್ರ ಸರ್ಕಾರದ ಯೋಜನೆಗೆ ಈಗ ಪರಿಸರ ಕಾಳಜಿಯೂ ಸೇರಿದ್ದು, ಮತ್ತೊಂದು ಮಹತ್ವಪೂರ್ಣ ಪರಿಸರ ಪ್ರೇಮಿ ಯೋಜನೆ ನಗರದಲ್ಲಿ ಜಾರಿಯಾಗುತ್ತಿದೆ.
ಅವಳಿ ನಗರಗಳಲ್ಲಿ ಸದ್ದು ಮಾಡಲಿವೆ ಪರಿಸರ ಸ್ನೇಹಿ ಸೈಕಲ್ ಇನ್ನು ಮುಂದೆ ಮಹಾನಗರದ ಸ್ಮಾರ್ಟ್ಸಿಟಿ ವ್ಯಾಪ್ತಿಯಲ್ಲಿ ವಿದೇಶಿ ಸ್ಮಾರ್ಟ್ ಸೈಕಲ್ಗಳ ಕಲರವ ಹೆಚ್ಚಲಿದೆ. ಹಸಿರೀಕರಣ, ಇಂಧನ ಉಳಿತಾಯವನ್ನು ಉತ್ತೇಜಿಸಲು ಸ್ಮಾರ್ಟ್ಸಿಟಿ ಯೋಜನೆಯಡಿ ಸಾರ್ವಜನಿಕರಿಗಾಗಿ ಸೈಕಲ್ ಯೋಜನೆ ರೂಪಿಸಿದೆ.
ಸ್ಮಾರ್ಟ್ಸಿಟಿಯ ಸೀಮಿತ 30 ಕಿಮೀ ವ್ಯಾಪ್ತಿಯಲ್ಲಿ ಸಾರ್ವಜನಿಕರು ಮುಕ್ತವಾಗಿ ಬಾಡಿಗೆ ಆಧಾರದ ಮೇಲೆ ಸೈಕಲ್ ಓಡಿಸ ಬಹುದಾಗಿದೆ. ಗಂಟೆಗೆ ಕನಿಷ್ಠ 10, ಗರಿಷ್ಠ 15 ರೂ. ದರ ನಿಗದಿಪಡಿಸುವ ಮೂಲಕ ಪರಿಸರ ಸ್ನೇಹಿ ಸೈಕಲ್ ಬಳಕೆಗೆ ನಿರ್ಧಾರ ಕೈಗೊಳ್ಳಲಾಗಿದೆ. 17 ರಿಂದ 19 ಸಾವಿರ ರೂ.ಗಳಂತೆ 340 ಸೈಕಲ್ ಗಳ ಖರೀದಿಗೆ ಮಲೇಷ್ಯಾದ ಕಂಪನಿಗೆ ಈಗಾಗಲೇ ಆರ್ಡರ್ ಮಾಡಲಾಗಿದ್ದು, ಮುಂದಿನ ವಾರ ಇಲ್ಲವೇ 15 ದಿನಗಳಲ್ಲಿ ಹುಬ್ಬಳ್ಳಿಗೆ ಸೈಕಲ್ ಬರಲಿವೆ.
ನಿರ್ವಹಣೆಗೆ 8.50 ಕೋಟಿ ರೂ. ಪಬ್ಲಿಕ್ ಬೈಸಿಕಲ್ ಶೇರಿಂಗ್ (ಪಿಬಿಎಸ್) ಯೋಜನೆಯನ್ನು 8.50 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಿದ್ದು, ನಿರ್ವಹಣೆಯನ್ನು ಬೆಂಗಳೂರು ಮೂಲದ ಕಂಪನಿಗೆ ವಹಿಸಲಾಗಿದೆ. ಅಲ್ಲದೇ ಡಿಜಿಟಲ್ ಪೇಮೆಂಟ್ ಮೂಲಕ ಬಾಡಿಗೆ ಪಾವತಿಗೆ ಅನುಕೂಲ ಮಾಡಲಾಗುತ್ತಿದ್ದು, ಹುಬ್ಬಳ್ಳಿಯ ಬಹುತೇಕ ಕಡೆಗಳಲ್ಲಿ ಸೈಕಲ್ ನಿಲ್ದಾಣಗಳ ನಿರ್ಮಾಣಕ್ಕೆ ಚಿಂತನೆ ನಡೆಸಲಾಗುತ್ತಿದೆ.
ಒಟ್ಟಿನಲ್ಲಿ ಹುಬ್ಬಳ್ಳಿ - ಧಾರವಾಡ ಅವಳಿನಗರದ ಗಲ್ಲಿಗಲ್ಲಿಗಳಲ್ಲಿ ವಿದೇಶಿ ಪರಿಸರ ಸ್ನೇಹಿ ಸೈಕಲ್ ಗಳು ಕೆಲವು ದಿನಗಳಲ್ಲಿ ಸಂಚಾರ ಆರಂಭಿಸಲಿದ್ದು, ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಲಿದೆ.