ಧಾರವಾಡ :ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಬೇಕಿದ್ದು, ಸರ್ಕಾರಿ ಬಸ್ನಲ್ಲಿ ಮಹಿಳೆಯರಿಗೆ ಉಚಿತ ಬಸ್ ಪಾಸ್ ನೀಡುವ ತೀರ್ಮಾನವನ್ನು ನಾಳೆ ಮಾಡುತ್ತಿದ್ದೇವೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದರು. ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮದಲ್ಲಿಂದು ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅವರ ನಾಯಕ ರಾಹುಲ್ ಗಾಂಧಿ ನಮ್ಮ ನಾಯಕ ಪ್ರಧಾನಿ ಮೋದಿ ಮುಂದೆ ನಿಲ್ಲೋಕೆ ಸಾಧ್ಯವಾ ಎಂದು ಪ್ರಶ್ನಿಸಿದರು.
ಈ ಬಾರಿ ಚುನಾವಣೆಯಲ್ಲಿ 25 ಸಾವಿರಕ್ಕೂ ಅಧಿಕ ಮತಗಳಿಂದ ಅಮೃತ್ ದೇಸಾಯಿ ಗೆಲ್ಲುತ್ತಾರೆ. ತುಪ್ಪರಿ ಹಳ್ಳದಲ್ಲಿ ಮಳೆ ಬಂದಾಗ ಸಾಕಷ್ಟು ಅನಾಹುತ ಆಗುತ್ತಿತ್ತು. 312 ಕೋಟಿ ರೂ ನೀಡಿ ಅದಕ್ಕೆ ಪರಿಹಾರ ಕಂಡುಕೊಂಡಿದ್ದೇವೆ. ಮಾಜಿ ಸಿಎಂ ವೀರೇಂದ್ರ ಪಾಟೀಲ್‌ರನ್ನು ರಾಜೀವ್ ಗಾಂಧಿಯವರು ವಿಮಾನ ನಿಲ್ದಾಣಕ್ಕೆ ಹೋಗಿ ರಾಜೀನಾಮೆ ಕೊಡಿ ಅಂತ ಹೇಳಿದರು. ವೀರೇಂದ್ರ ಪಾಟೀಲ್‌ರನ್ನು ಯಾವ ಕಾರಣಕ್ಕೆ ಅಧಿಕಾರದಿಂದ ಕೆಳಗೆ ಇಳಿಸಿದ್ದೀರಿ. ಕಾಂಗ್ರೆಸ್ ಪಕ್ಷ ದೇಶದಲ್ಲಿ ಎಲ್ಲಿದೆ, ಇದು ನಿಮ್ಮ ಯೋಗ್ಯತೆ ಎಂದು ಹರಿಹಾಯ್ದರು.
ಎಲ್ಲ ರಾಜ್ಯಗಳಲ್ಲೂ ನೀವು ಸೋತಿದ್ದೀರಿ. ಚುನಾವಣೆ ನಂತರ ಕಾಂಗ್ರೆಸ್ ದಿವಾಳಿಯಾಗಲಿದೆ. ರೈತರಿಗೆ ಉಚಿತ ವಿದ್ಯುತ್ ನೀಡಿದ್ದು ನಾವು. ರೈತರಿಗಾಗಿ ಪ್ರತ್ಯೇಕ ಬಜೆಟ್ ಮಂಡನೆ ಮಾಡಿದ್ದೇನೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಬಗ್ಗೆ ಅಲ್ಲೊಬ್ಬ ಇಲ್ಲೊಬ್ಬ ಹಗುರವಾಗಿ ಮಾತನಾಡುತ್ತಾರೆ. ಖರ್ಗೆಯವರು ಮೋದಿಜಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ರಾಷ್ಟ್ರೀಯ ಅಧ್ಯಕ್ಷ ಈ ರೀತಿ ಕೆಳಮಟ್ಟದ ಮಾತು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಡ್ರೆಸ್ ಇಲ್ಲದ ಹಾಗೆ ಓಡಿಸಬೇಕು. ಕೌಂಟಿಂಗ್ ಏಜೆಂಟ್‌ಗಳು ಅಲ್ಲಿಂದಲೇ ಓಡಬೇಕು ಹಾಗೆ ಮತ ಹಾಕಿ ಬಿಎಸ್ವೈ ಮನವಿ ಮಾಡಿದರು.