ಹುಬ್ಬಳ್ಳಿ: ಕೊರೊನಾ ಸೋಂಕಿತರ ಮೃತ ದೇಹ ಸಾಗಣೆಗೆ ಉಚಿತವಾಗಿ ವಾಹನ ಸೌಲಭ್ಯ, ಸಂಸ್ಕಾರಕ್ಕೆ ತಗಲುವ ವೆಚ್ಚವನ್ನು ಪಾಲಿಕೆಯಿಂದ ಭರಿಸಿ ಉಚಿತವಾಗಿ ಶವಸಂಸ್ಕಾರ ನೆರವೇರಿಸಲು ಪಾಲಿಕೆಯಿಂದ ಕ್ರಮ ಕೈಗೊಳ್ಳಲಾಗಿದೆ.
ಕೊರೊನಾ ಸೋಂಕಿತರು ಮೃತಪಟ್ಟರೆ ಅಂತಹವರಿಗೆ ಉಚಿತ ಅಂತ್ಯಕ್ರಿಯೆ: ಹು -ಧಾ ಪಾಲಿಕೆ ನಿರ್ಧಾರ
ಸೋಂಕಿತರ ಸಾವಿನಿಂದ ತೊಂದರೆಯಲ್ಲಿರುವ ಕುಟುಂಬಗಳಿಗೆ ನೆರವಾಗಲು ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮಾರ್ಗದರ್ಶನದಲ್ಲಿ ಮಹಾನಗರ ಪಾಲಿಕೆಯು ಮೃತ ದೇಹದ ಅಂತ್ಯಸಂಸ್ಕಾರ ನೆರವೇರಿಲು ನಿರ್ಧರಿಸಿದೆ.
ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್-19 ಸೊಂಕಿನಿಂದ ಮೃತಪಟ್ಟ ದೇಹಗಳನ್ನು ಸಾಗಿಸಲು ಆ್ಯಂಬುಲೆನ್ಸ್ ಮಾಲೀಕರು ಮೃತರ ಕುಟುಂಬದವರಿಂದ ಹೆಚ್ಚಿನ ಹಣ ಸಂಗ್ರಹಣೆ ಮಾಡುತ್ತಿರುವುದು ಕಂಡು ಬಂದಿದೆ. ಈ ಹಿನ್ನೆಲೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯಿಂದ ಕೋವಿಡ್-19 ಸೋಂಕಿನಿಂದ ಮೃತಪಟ್ಟ ದೇಹಗಳನ್ನು ಕಿಮ್ಸ್, ಜಿಲ್ಲಾಸ್ಪತ್ರೆ ಹಾಗೂ ಎಸ್‍ಡಿಎಂ ಸೇರಿದಂತೆ ಖಾಸಗಿ ಆಸ್ಪತ್ರೆಗಳಿಂದ ನಿಗದಿತ ಹೆಗ್ಗೇರಿ ಸ್ಮಶಾನಕ್ಕೆ ಗೌರವಯುತವಾಗಿ ಕೋವಿಡ್-19 ರ ನಿಯಮಾವಳಿಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಲು ಕ್ರಮ ಜರುಗಿಸಲಾಗುತ್ತಿದೆ.
ನಿಧನರಾದ ಸೋಂಕಿತರ ಕುಟುಂಬದ ಸದಸ್ಯರು ಮಹಾನಗರ ಪಾಲಿಕೆಯ ಸಹಾಯವಾಣಿ - 0836-2213888, 9141051611 ಹಾಗೂ 0836-2213898 ಸಂಖ್ಯೆಗೆ ಕರೆ ಮಾಡಿ ತಿಳಿಸಿದರೆ ತಕ್ಷಣ ನೆರವಿಗೆ ದಾವಿಸಲಾಗುವುದು ಎಂದು ಪಾಲಿಕೆ ಆಯುಕ್ತ ಗುರುದತ್ತ ಹೆಗಡೆ ತಿಳಿಸಿದ್ದಾರೆ.