ಹುಬ್ಬಳ್ಳಿ: ರುಂಡ, ಮುಂಡ ಸೇರಿದಂತೆ ದೇಹದ ಇತರೆ ಭಾಗಗಳನ್ನು ಕತ್ತರಿಸಿ ಬೀಭತ್ಸವಾಗಿ ಕೊಲೆ ಮಾಡಿರುವ ಪ್ರಕರಣ ನಗರದಲ್ಲಿ ಬೆಳಕಿಗೆ ಬಂದಿದೆ.
ರುಂಡ ಮುಂಡ ಬೇರೆ, ದೇಹದ ಎಲ್ಲಾ ಅಂಗಗಳು ದಿಕ್ಕಿಗೊಂದೊಂದು .. ಹುಬ್ಬಳ್ಳಿಯಲ್ಲಿ ಬೆಚ್ಚಿ ಬೀಳಿಸುವ ಕೊಲೆ! - ಹುಬ್ಬಳ್ಳಿಯಲ್ಲಿ ಶವವೊಂದರ ರುಂಡ ಪತ್ತೆ
ಸೋಮವಾರ ಹುಬ್ಬಳ್ಳಿ ನಗರದ ಕುಸುಗಲ್ ರಸ್ತೆ ಬಳಿ ಮೃತದೇಹವೊಂದು ಪತ್ತೆಯಾದ ಬೆನ್ನಲ್ಲೇ ಇಂದು ಶವ ಪತ್ತೆಯಾದ ಕೆಲವು ಮೀಟರ್ ಅಂತರದಲ್ಲಿ ಆ ಮೃತದೇಹದ ಎರಡು ಕೈ ಹಾಗೂ ಒಂದು ಕಾಲು ದೊರೆತಿವೆ. ಈ ಭಯಂಕರ ಕೊಲೆ ನೋಡಿ ಜನ ಬೆಚ್ಚಿಬಿದ್ದಿದ್ದಾರೆ.
ಮುಂಡ ಬೇರೆ, ಎರಡು ಕೈ ಬೇರೆ ಮಾಡಿದ್ದು, ಒಂದು ಕಾಲು ಪತ್ತೆಯಾಗಿದೆ. ಚಿಂದಿ- ಚಿಂದಿಯಾಗಿ ಶವ ಪತ್ತೆಯಾದ ಹಿನ್ನೆಲೆ ವಾಣಿಜ್ಯ ನಗರಿ ಜನತೆಯನ್ನು ಈ ಕೊಲೆ ಪ್ರಕರಣ ಬೆಚ್ಚಿಬೀಳಿಸಿದೆ. ನಗರದ ಕುಸುಗಲ್ ರಸ್ತೆಯಲ್ಲಿಯ ಶಾಲೆಯೊಂದರ ಬಳಿ ಸೋಮವಾರ ಮೃತದೇಹವೊಂದು ಪತ್ತೆಯಾಗಿತ್ತು. ಇದೀಗ ದೇಹ ಸಿಕ್ಕ ಕೆಲವು ಮೀಟರ್ ಅಂತರದಲ್ಲಿ ಎರಡು ಕೈ ಹಾಗೂ ಒಂದು ಕಾಲು ದೊರಕಿದ್ದು, ಇನ್ನೊಂದು ಕಾಲಿಗಾಗಿ ಮತ್ತೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಧಾರವಾಡ ಜಿಲ್ಲೆಯ ಇತಿಹಾಸದಲ್ಲಿಯೇ ಇಂತಹದೊಂದು ಕ್ರೈಂ ಪ್ರಕರಣ ನಡೆದಿಲ್ಲ. ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳ ಗ್ರಾಮದ ಹೊರವಲಯದಲ್ಲಿ ದೇಹದ ರುಂಡ ಸಿಕ್ಕ ನಂತರದ ಬೆಳವಣಿಗೆಯಲ್ಲಿ ಕೇಶ್ವಾಪುರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ದೇಹ ಮತ್ತು ಕೈ-ಕಾಲುಗಳು ದೊರೆತಿವೆ. ದೇಹವನ್ನ ಸುಡುವ ಪ್ರಯತ್ನವೂ ನಡೆದಿದ್ದು, ಇನ್ನೊಂದು ಕಾಲು ಎಲ್ಲಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ. ಮೃತದೇಹವನ್ನ ಇಷ್ಟೊಂದು ಕ್ರೂರವಾಗಿ ಕತ್ತರಿಸಿ, ಬೇರೆ ಬೇರೆ ಜಾಗದಲ್ಲಿ ಹಾಕಿದ್ದು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.