ಹುಬ್ಬಳ್ಳಿ: ಕೋವಿಡ್ ಎದುರು ಸಂಬಂಧಗಳೇ ಸತ್ತು ಹೋಗಿವೆ. ವೈರಸ್ನಿಂದ ಮೃತರಾದವರ ಅಂತ್ಯಕ್ರಿಯೆ ಮಾಡಲು ಅವರ ಬಂಧುಗಳು ಹಿಂದೇಟು ಹಾಕುತ್ತಿದ್ದಾರೆ. ಈ ನಡುವೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಸಮಾನ ಮನಸ್ಕ ಯುವಕರ ತಂಡವೊಂದು ಕೋವಿಡ್ನಿಂದ ಮೃತರಾದವರ ಬಂಧು ಬಳಗವಾಗಿ ಅವರ ಧರ್ಮದಂತೆ ವಿಧಿವತ್ತಾಗಿ ಅಂತ್ಯಕ್ರಿಯೆ ಮಾಡುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಒದಗಿಸುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದೆ.
ಸುಮಾರು 20 ಜನರ ಯುವಕರ ತಂಡದ ನೇತೃತ್ವ ವಹಿಸಿದ ಬಸೀರ್ ಗುಡ್ಮಾಲೆ ಅವರು, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಕಾರ್ಪೊರೇಟರ್ ಆಗಿ ಕಾರ್ಯನಿರ್ವಹಿದ್ದಾರೆ. ಇವರು ಕಳೆದ ಹತ್ತು ವರ್ಷಗಳಿಂದ ಅನಾಥ ಶವಗಳಿಗೆ ಮುಕ್ತಿ ನೀಡುವ ಕೆಲಸವನ್ನು ಮಾಡುತ್ತಿದ್ದು, ಮೃತ ವ್ಯಕ್ತಿ ಯಾವ ಧರ್ಮಕ್ಕೆ ಸೇರಿದವರಾಗಿದ್ದಾರೋ ಅದೇ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ಮಾಡುತ್ತ ಬಂದಿದ್ದಾರೆ.
ಈಗ ಕೊರೊನಾ ಸಂಕಷ್ಟ ಕಾಲದಲ್ಲಿ ಮಾನವೀಯ ಮೌಲ್ಯಗಳು ಸತ್ತು ಹೋಗಿದ್ದರೂ ಅವುಗಳನ್ನು ಎತ್ತಿ ಹಿಡಿಯುವ ಕಾಯಕ ಮಾಡುತ್ತಿದ್ದಾರೆ. ಬಂಧು ಬಳಗ ಇದ್ದರೂ ತಮ್ಮವರ ಅಂತ್ಯಕ್ರಿಯೆ ಮಾಡಲು ಹಿಂದೇಟು ಹಾಕುವವರ ಶವಗಳನ್ನು ಸ್ವತಃ ಇವರ ತಂಡ ತಗೆದುಕೊಂಡು ಹೋಗಿ ಹಿಂದು ಶವಗಳಿಗೆ ಅವರ ಸಂಪ್ರದಾಯದಂತೆ, ಮುಸ್ಲಿಂ ಶವಗಳಿಗೆ ಮುಸ್ಲಿಂ ಸಂಪ್ರದಾಯದಂತೆ, ಕ್ರಿಶ್ಚಿಯನ್ ಸಮುದಾಯವರಿಗೆ ಅವರ ಧರ್ಮದ ಪ್ರಕಾರವೇ ವಿಧಿವತ್ತಾಗಿ ಅಂತ್ಯ ಸಂಸ್ಕಾರ ನೆರವೇರಿಸುತ್ತಾರೆ.