ಹುಬ್ಬಳ್ಳಿ : ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲವೆಂದು ಉಪಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ ಹೇಳಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸಿಎಂ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ, ಸದ್ಯಕ್ಕೆ ಯಾವುದೇ ಮಂತ್ರಿ ಮಂಡಲ ವಿಸ್ತರಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಾಗ್ವಾದದ ಕುರಿತು ಪ್ರತಿಕ್ರಿಯಿಸಿ, ಅವರು ಇಬ್ಬರೂ ಮೌನವಾಗಿದ್ದಾರೆ. ಪರಸ್ಪರ ಟೀಕೆ ಮಾಡುವುದಿಲ್ಲ ಎಂದಿದ್ದಾರೆ. ಹಾಗಾಗಿ, ಆ ವಿಚಾರ ಮಾತನಾಡುವುದು ಸೂಕ್ತವಲ್ಲ ಎಂದರು.
ಡಿಸಿಎಂ ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ಮಾತನಾಡಿ, ರಮೇಶ್ ಜಾರಕಿಹೊಳಿ ಸಮಾಧಾನ ಆಗಿರುವುದು ಒಳ್ಳೆ ಬೆಳವಣಿಗೆ ಎಂದರು. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ದೆಹಲಿ ಪ್ರವಾಸದ ಬಗ್ಗೆ ಪ್ರತಿಕ್ರಿಯಿಸಿ, ಪಕ್ಷದ ವರಿಷ್ಠರು ಎಲ್ಲವನ್ನು ಗಮನಿಸುತ್ತಾರೆ ಎಂದು ಪ್ರತಿಕ್ರಿಯಿಸಿದರು.
ಓದಿ : ಸಿಎಂ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು: ದಿನೇಶ್ ಗುಂಡೂರಾವ್
ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯಾವ ರೀತಿಯಾಗಿ ಅನುಷ್ಠಾನ ಮಾಡಬೇಕು ಎಂಬುದರ ಬಗ್ಗೆ ಪ್ರಮುಖ ಸಂಸ್ಥೆಗಳ ಜೊತೆ ಮಾತುಕತೆ ನಡೆಯಲಿದೆ. ಹುಬ್ಬಳ್ಳಿ ಭಾಗದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಅಗಬೇಕು ಎನ್ನುವ ನಿಟ್ಟಿನಲ್ಲಿಯೂ ಚರ್ಚೆ ನಡೆಯಲಿದೆ. ಕೌಶಲ್ಯತೆಗಳನ್ನು ಯಾವ ರೀತಿ ಬೆಳೆಸಬೇಕು ಎಂಬುದರ ಬಗ್ಗೆ ಮಾತುಕತೆ ನಡೆಸಿದ್ದೇವೆ ಎಂದು ತಿಳಿಸಿದರು.
ಸಿದ್ಧಾರೂಢ ಮಠಕ್ಕೆ ಡಿಸಿಎಂ ಭೇಟಿ :
ಹುಬ್ಬಳ್ಳಿ ಪ್ರವಾಸದಲ್ಲಿರುವ ಡಿಸಿಎಂ ಅಶ್ವತ್ಥ್ ನಾರಾಯಣ ಇಂದು ಬೆಳಗ್ಗೆ ನಗರದ ಪ್ರಸಿದ್ಧ ಸಿದ್ಧಾರೂಢ ಮಠಕ್ಕೆ ಭೇಟಿ ನೀಡಿ ಸಿದ್ಧಾರೂಢರು ಮತ್ತು ಗುರುನಾಥರೂಢರ ಗದ್ದುಗೆಯ ದರ್ಶನ ಪಡೆದರು. ಇಂದು ನಗರದಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಡಿಸಿಎಂ ಪಾಲ್ಗೊಳ್ಳಲಿದ್ದಾರೆ.