ಹುಬ್ಬಳ್ಳಿ:ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹುಬ್ಬಳ್ಳಿ ತಹಶೀಲ್ದಾರ ಕಚೇರಿಗೆ ಇಂದು ಭೇಟಿ ನೀಡಿ ವಿವಿಧ ಶಾಖೆಗಳ ಕಾರ್ಯ ಪ್ರಗತಿ ಪರಿಶೀಲಿಸಿ, ಸಾರ್ವಜನಿಕರಿಂದ ಮನೆ ಪರಿಹಾರ, ಪಿಂಚಣಿ, ಬೆಳೆ ಹಾನಿ ಪರಿಹಾರ, ಜಮೀನು ರಸ್ತೆ, ಶಿರಗುಪ್ಪಿ ರುದ್ರಭೂಮಿ ಸಮಸ್ಯೆ ಸೇರಿದಂತೆ ವಿವಿಧ ಕುಂದು ಕೊರತೆಗಳ ಕುರಿತು ಅಹವಾಲುಗಳನ್ನು ಸ್ವೀಕರಿಸಿದರು.
ಶಿರಗುಪ್ಪಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ. ಎರಡೂವರೆ ಎಕರೆ ಪ್ರದೇಶದಲ್ಲಿ ರುದ್ರಭೂಮಿಯಿದೆ. ಹಳ್ಳದ ಪಕ್ಕದಲ್ಲಿ ರುದ್ರಭೂಮಿಯಿದ್ದು, ಪ್ರವಾಹ ಬಂದಾಗ ಸಮಸ್ಯೆ ಉಂಟಾಗುತ್ತಿದೆ. ಅಲ್ಲದೇ ಸುಮಾರು 200 ಎಕರೆಗೂ ಹೆಚ್ಚು ಹೊಲಗಳಿಗೆ ನೀರು ನುಗ್ಗಿ ಬೆಳೆಹಾನಿ ಉಂಟಾಗುತ್ತಿದೆ. ಈ ಕೂಡಲೇ ಎಲ್ಲ ಸಮಸ್ಯೆಗಳಿಗೆ ಮುಕ್ತಿ ನೀಡಲಾಗುವುದು ಎಂದರು. ಜೊತೆಗೆ ಸಮಸ್ಯೆಗಳ ಕುರಿತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಫೋನ್ ಮೂಲಕ ಚರ್ಚಿಸಿದರು.
ಕೋಳಿವಾಡ ಗ್ರಾಮದಲ್ಲಿ ಹೊಲಗಳಿಗೆ ತೆರಳಲು ರಸ್ತೆ ಇರುವುದಿಲ್ಲ ಎಂದು ಗ್ರಾಮಸ್ಥರು ಅರ್ಜಿ ಸಲ್ಲಿಸಿದರು. ಈ ಬಗ್ಗೆ ತಹಶೀಲ್ದಾರ ಪ್ರಕಾಶ ನಾಶಿ ಅವರು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ. ಹಾಗೆಯೇ ಇ-ಆಸ್ತಿ ನೋಂದಣಿ ಮಾಡಿಸುವಾಗ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಸರ್ವರ್ ಸಮಸ್ಯೆಯಿಂದ ಜನರಿಗೆ ತೊಂದರೆಯಾಗುತ್ತಿದ್ದು, ಈ ಕುರಿತು ಪರಿಶೀಲಿಸಲಾಗುವುದು. ಇನ್ನೂ ಧಾರವಾಡ ಉತ್ಸವ ನಡೆಸುವ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ:18 ವರ್ಷ ತುಂಬಿದ ಯುವಕರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಈಗಾಗಲೇ ಡಿಸೆಂಬರ್ 8 ರವರೆಗೆ ಮನೆ ಮನೆಗೆ ತೆರಳಿ ಹೊಸ ಮತದಾರರನ್ನು ಮತದಾರರರ ಪಟ್ಟಿಗೆ ಸೇರಿಸುವ ಕಾರ್ಯ ಪ್ರಗತಿಯಲ್ಲಿದೆ. ಚುನಾವಣಾ ಆಯೋಗದ ವೋಟರ್ ಹೆಲ್ಪ್ ಲೈನ್ (Voter Helpline) ಅಪ್ಲಿಕೇಶನ್ ಅಥವಾ ಫಾರ್ಮ್ ನಂಬರ್ 6 ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಗೆ ಸೇರಿಕೊಳ್ಳಬಹುದು. ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನು NVSP (National Voters Service Portal) ವೆಬ್ ಸೈಟ್ ಮೂಲಕ ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಪ್ರಿ ಪೇಯ್ಡ್ ಆಟೋ ಸರ್ವಿಸ್: ಪ್ರಯಾಣಿಕರ ಹಿತದೃಷ್ಟಿಯಿಂದ ನಗರದ ರೈಲ್ವೆ ನಿಲ್ದಾಣ, 3 ಮುಖ್ಯ ಬಸ್ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರಿ ಪೇಯ್ಡ್ ಆಟೋ ಸೇವೆಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ. ಈ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು. ಪ್ರಯಾಣಿಕರು ರಾತ್ರಿ ವೇಳೆಯಲ್ಲಿ ಪ್ರಯಾಣಿಸಲು ಅನುಕೂಲವಾಗಲಿದೆ. ಅಲ್ಲದೇ ಸಹಾಯವಾಣಿ ಸಂಖ್ಯೆಯನ್ನು ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗುವುದು. ಆಟೋಗಳಿಗೆ ಮೀಟರ್ ಅಳವಡಿಕೆಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು.
ಅಹವಾಲುಗಳಿಗೆ ಸ್ಥಳದಲ್ಲಿಯೇ ಪರಿಹಾರ:ಪಿಂಚಣಿ, ಬೆಳೆ ಹಾನಿ ಪರಿಹಾರ, ವಾರಸಾ ಅರ್ಜಿಗಳ ಅಹವಾಲುಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು. ಹುಬ್ಬಳ್ಳಿ ತಹಶೀಲ್ದಾರ ಪ್ರಕಾಶ ನಾಶಿ, ಕಂದಾಯ ಇಲಾಖೆಯ ಅಧಿಕಾರಿಗಳು, ವಿವಿಧ ಗ್ರಾಮಗಳ ಗ್ರಾಮಸ್ಥರು, ಇತರರು ಹಾಜರಿದ್ದರು.
ಇದನ್ನೂ ಓದಿ:ಹುಬ್ಬಳ್ಳಿ: 80 ಸಾವಿರ ಮೌಲ್ಯದ ಗಾಂಜಾ ವಶಪಡಿಸಿಕೊಂಡ ಪೊಲೀಸರು