ಹುಬ್ಬಳ್ಳಿ:ಸತತ ಬರಗಾಲದಿಂದ ಬೇಸತ್ತ ಉತ್ತರ ಕರ್ನಾಟಕ ಭಾಗದಲ್ಲಿ ಆಶಾ ಭಾವನೆ ಮೂಡಿದೆ. ಬರದ ಕರಿ ಛಾಯೆ ಆವರಿಸಿದ್ದ ಈ ಭಾಗದಲ್ಲಿ ಮೋಡ ಬಿತ್ತನೆಗೆ ರಾಜ್ಯ ಸರ್ಕಾರ ಕೈ ಹಾಕಿದ್ದು, ಇಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ಉತ್ತರ ಕರ್ನಾಟಕ ಭಾಗದ ರೈತರ ಮೊಗದಲ್ಲಿ ಇಂದು ಮಂದಹಾಸ ಮೂಡಿದೆ. ಕಳೆದ ಎರಡ್ಮೂರು ವರ್ಷಗಳಿಂದ ಮಳೆಯಿಲ್ಲದೇ ರೈತರು ಕಂಗಾಲಾಗಿದ್ದರು. ಹೀಗಾಗಿ ರಾಜ್ಯ ಸರ್ಕಾರ ಮೋಡ ಬಿತ್ತನೆ ಕಾರ್ಯರಂಭ ಮಾಡಿದ್ದು, ಮೋಡ ಬಿತ್ತನೆ ಮಾಡುವ ವಿಮಾನ (ಬೀಚ್ ಕ್ರಾಫ್ಟ್) ಜಿಲ್ಲೆಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ರಾಜ್ಯ ಸರ್ಕಾರ ವಿದೇಶದಿಂದ ತರಿಸಿದ ಮೋಡ ಬಿತ್ತನೆ ತಂತ್ರಜ್ಞಾನ ಹೊಂದಿರುವ ವಿಮಾನ ಇವತ್ತು ಬೆಳಗ್ಗೆ ಜಿಲ್ಲೆಗೆ ಬಂದಿಳಿದಿದ್ದು, ಮೋಡ ಬಿತ್ತನೆಗೆ ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಗದಗದಲ್ಲಿರುವ ರಡಾರ್ ಕೇಂದ್ರ ನೀಡುವ ಸಂದೇಶದ ಆಧಾರದ ಮೇಲೆ 200 ಕಿ.ಮೀ. ವ್ಯಾಪ್ತಿಯಲ್ಲಿನ ಮೋಡಗಳಲ್ಲಿ ನೀರಿನ ಸಾಂದ್ರತೆ, ತೇವಾಂಶ ಗುರುತಿಸಿ ಅವುಗಳ ಬಗ್ಗೆ ಚಿತ್ರ ಸಹಿತ ಮಾಹಿತಿಯನ್ನು ರಡಾರ್ ನೀಡಲಿದೆ. ವಿಮಾನದ ಪೈಲೆಟ್ ಆ ಮಾಹಿತಿ ಆಧರಿಸಿ ಮೋಡ ಬಿತ್ತನೆ ಮಾಡಲಿದ್ದಾರೆ. ಉತ್ತರ ಕರ್ನಾಟಕದ ಹುಬ್ಬಳ್ಳಿ, ಬಾಗಲಕೋಟೆ, ಗದಗದಲ್ಲಿ ಮೋಡಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ನಾಳೆಯಿಂದ ವಿಮಾನ ಹಾರಾಟ ನಡೆಸಲಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯ ಏರ್‌ಪೋರ್ಟ್‌ನಿಂದ ಮುಂದಿನ 90 ದಿನಗಳ ಕಾಲ ಮೋಡ ಬಿತ್ತನೆ ಆಗಲಿದೆ. ಕಳೆದ ತಿಂಗಳ 25ರಿಂದ ಮೋಡ ಬಿತ್ತನೆ ಆರಂಭಗೊಳ್ಳಬೇಕಿತ್ತು. ಆದರೆ ಸರ್ಕಾರದಿಂದ ಅಧಿಕೃತ ಆದೇಶ ತಡವಾಗಿ ಕೈ ಸೇರಿದ ಕಾರಣ ಬಿತ್ತನೆ ಪ್ರಕ್ರಿಯೆ ಕೊಂಚ ತಡವಾಗಿದೆ. ಈ ನಿಟ್ಟಿನಲ್ಲಿ ಒಂದು ವಿಮಾನ ಈಗಾಗಲೇ ಬಂದಿಳಿದಿದ್ದು, ಮತ್ತೊಂದು ವಿಮಾನ ಶೀಘ್ರದಲ್ಲೇ ಬರಲಿದೆ. ರಾಜ್ಯದಲ್ಲಿ ಮೂರು ಕಡೆ ರಡಾರ್ ಸಂಪರ್ಕ ಕೇಂದ್ರಗಳನ್ನು ಅಳವಡಿಸಲಾಗಿದ್ದು, ಬೆಂಗಳೂರು, ಗದಗ ಹಾಗೂ ಯಾದಗಿರಿಯ ಶೋರಾಪುರದಲ್ಲಿ ರಡಾರ್ ಅಳವಡಿಸಲಾಗಿದೆ. ಅವುಗಳ ಸೂಚನೆಯ ಮೇರೆಗೆ ಯಾವ ಭಾಗದಲ್ಲಿ ಮೋಡ ಕಾಣಿಸುತ್ತೋ ಅಲ್ಲಿ ಮೋಡ ಬಿತ್ತನೆ ಕಾರ್ಯ ನಡೆಸಲಾಗುತ್ತಿದೆ ಎಂದರು.