ಹುಬ್ಬಳ್ಳಿ:ಆಹಾರವಿಲ್ಲದೆ ಪರದಾಡುತ್ತಿದ್ದ ಕೂಲಿ ಕಾರ್ಮಿಕರು ಹಾಗೂ ಕಿಮ್ಸ್ ಆಸ್ಪತ್ರೆಯಲ್ಲಿರುವ ರೋಗಿಗಳ ಸಂಬಂಧಿಗಳ ಹಸಿವಿನ ಸಮಸ್ಯೆಗೆ ಜಿಲ್ಲಾಡಳಿತ ಸ್ಪಂದಿಸಿದೆ. ಈಟಿವಿ ಭಾರತ ವರದಿ ಬಳಿಕ ಜಿಲ್ಲಾಡಳಿತದ ಆದೇಶದ ಮೇರೆಗೆ ತಾಲೂಕು ಆಡಳಿತ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದೆ.
ಈ ಕುರಿತಂತೆ 'ಈಟಿವಿ ಭಾರತ' 'ನೀವು ಬಂದಿದ್ದೇ ನಮ್ಮ ಪುಣ್ಯ, ಇಲ್ಲಂದ್ರೆ ನೀರು ಕುಡಿದು ಮಲಗಬೇಕಿತ್ರೀ'... ಕಿಮ್ಸ್ ಆಸ್ಪತ್ರೆಯಲ್ಲಿರುವವರ ಅಳಲು ಎಂಬ ವರದಿಯನ್ನು ಪ್ರಕಟಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದೀಪಾ ಚೋಳನ್, ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ನಾನಾ ಜಿಲ್ಲೆಗಳಿಂದ ನಗರಕ್ಕೆ ಕೆಲಸಕ್ಕಾಗಿ ಬಂದಿದ್ದ ಕೂಲಿ ಕಾರ್ಮಿಕರಿಗೆ ಹಾಗೂ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಜೊತೆ ಬಂದಿರುವ ಅವರ ಸಂಬಂಧಿಕರಿಗೆ ಊಟದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.