ಕರ್ನಾಟಕ

karnataka

ಕೋವಿಡ್ ಹೆಚ್ಚಳ: ಖಾಸಗಿ ಆಸ್ಪತ್ರೆಗಳ ವೈದ್ಯರು, ಮುಖ್ಯಸ್ಥರೊಂದಿಗೆ ಧಾರವಾಡ ಡಿಸಿ ಸಭೆ

By

Published : Apr 15, 2021, 10:15 PM IST

ಜಿಲ್ಲೆಯಾದ್ಯಾದಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ತಪ್ಪದೇ 2ನೇ ಡೋಸ್ ಲಸಿಕೆಯನ್ನು ಪಡೆಯಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಡಿಸಿ ಹೇಳಿದರು.

Dc
Dc

ಧಾರವಾಡ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅಗತ್ಯವಿದ್ದಲ್ಲಿ ಸರ್ಕಾರದ ಆದೇಶದಂತೆ ಜಿಲ್ಲೆಯ ಖಾಸಗಿ ಆಸ್ಪತ್ರೆಗಳ ಶೇ. 50ರಷ್ಟು ಹಾಸಿಗೆಗಳನ್ನು ಕೋವಿಡ್ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಕಚೇರಿಯ ನೂತನ ಸಭಾಂಗಣದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರೊಂದಿಗೆ ನಡೆಸಿದ ‌ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆ ಹಾಗೂ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್ ಪೀಡಿತರಿಗೆ ಅಗತ್ಯ ಚಿಕಿತ್ಸೆ ನೀಡಲು ಔಷಧ ಮತ್ತು ಹಾಸಿಗೆ ವ್ಯವಸ್ಥೆ ಇದೆ. ಮುಂದಿನ ದಿನಗಳಲ್ಲಿ ಅಗತ್ಯವಾದರೆ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ ರೋಗಿಗಳನ್ನು ರೆಫರಲ್ ಪತ್ರ ನೀಡಿ ಕಳಿಸಲಾಗುವುದು ಎಂದು ಹೇಳಿದರು.

ಈಗ ಕಿಮ್ಸ್ ಆಸ್ಪತ್ರೆಯಲ್ಲಿ 97 ಪ್ರಕರಣ, ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ 50 ಮತ್ತು 32 ಐಸಿಯು ಪ್ರಕರಣಗಳು ದಾಖಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 837 ಕೋವಿಡ್ ಸಕ್ರಿಯ ಪ್ರಕರಣ ವರದಿಯಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಖಾಸಗಿ ಆಸ್ಪತ್ರೆಗಳಲ್ಲಿ ಶೇ. 50ರಷ್ಟು ಬೆಡ್‍ಗಳನ್ನು ಕೋವಿಡ್ ರೋಗಿಗಳಿಗೆ ಮೀಸಲಿಡಲಾಗಿದ್ದು, ಉತ್ತಮವಾದ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಾದ್ಯಾದಂತ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಸಾರ್ವಜನಿಕರು ತಪ್ಪದೇ 2ನೇ ಡೋಸ್ ಲಸಿಕೆಯನ್ನು ಪಡೆಯಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದರು.

ಕಿಮ್ಸ್ ಆಸ್ಪತ್ರೆಯಲ್ಲಿ 200 ರಮ್​ಡೆಸಿವರ್​​​, ಜಿಲ್ಲಾ ಆಸ್ಪತ್ರೆಯಲ್ಲಿ 200, ಜಿಲ್ಲಾ ಔಷಧ ದಾಸ್ತಾನುದಲ್ಲಿ 50 ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 1000 ಸೆರಿದಂತೆ ಜಿಲ್ಲೆಯಲ್ಲಿ ಒಟ್ಟು 1500 ರಮ್​ಡೆಸಿವರ್ ಇಂಜಕ್ಷನ್ ಲಭ್ಯವಿದೆ.

ಲಿಕ್ವಿಡ್ ಆಕ್ಸಿಜನ್ ಕೂಡ ಲಭ್ಯವಿದ್ದು ಚಿಕಿತ್ಸೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗಿದೆ. ಕಿಮ್ಸ್ ಆಸ್ಪತ್ರೆಯಲ್ಲಿ ಸುಮಾರು 250 ಬೆಡ್‍ಗಳನ್ನು ಮೀಸಲಿಡಲಾಗಿದೆ. ಅದರಲ್ಲಿ 97 ಬೆಡ್‍ಗಳನ್ನು ಭರ್ತಿ ಮಾಡಲಾಗಿದ್ದು, ಪ್ರತಿ ತಾಲೂಕು ಆಸ್ಪತ್ರೆಗಳಲ್ಲಿ (ಕಲಘಟಗಿ, ಕುಂದಗೋಳ, ನವಲಗುಂದ) ಸುಮಾರು 50ರಷ್ಟು ಬೆಡ್‍ಗಳನ್ನು ಮೀಸಲಿಟ್ಟು, ಚಿಕಿತ್ಸೆಗೆ ಬೇಕಾದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ.

ಕೋವಿಡ್ ಚಿಕಿತ್ಸೆಗಾಗಿ ಸರ್ಕಾರವು ದರಗಳನ್ನು ನಿಗದಿಗೊಳಿಸಿ ಅಧಿಸೂಚನೆ ಹೊರಡಿಸಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ರೆಫರಲ್ ಪತ್ರದ ಮೂಲಕ ಕಳಿಸುವ ಪ್ರಕರಣಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸಾ ದರ: ಸಾಮಾನ್ಯ ವಾರ್ಡ್, 5200, ಹೆಚ್.ಡಿ.ಯು - 7,000, ಆಮ್ಲಜನಕ ರಹಿತ ಐಸೋಲೇಷನ್ ವಾರ್ಡ್ 8,500, ಆಮ್ಲಜನಕ ಸಹಿತ ಐಸೋಲೆಶನ್ ವಾರ್ಡ್ 10,000 ರೂ.ಗಳನ್ನು ನಿಗದಿಪಡಿಸಲಾಗಿದೆ.

ಕೋವಿಡ್ ಪೀಡಿತರು ನೇರವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಕೋವಿಡ್ ಚಿಕಿತ್ಸಾ ದರ:

ಸಾಮಾನ್ಯ ವಾರ್ಡ್ 10,000, ಹೆಚ್.ಡಿ.ಯು - 12,000, ಆಮ್ಲಜನಕ ರಹಿತ ಐಸೋಲೇಷನ್ ವಾರ್ಡ್ - 15,000, ಆಮ್ಲಜನಕ ಸಹಿತ ಐಸೋಲೇಷನ್ ವಾರ್ಡ್ - 25,000 ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ತಿಳಿಸಿದರು.

ಖಾಸಗಿ ಆಸ್ಪತ್ರೆಗಳ ವೈದ್ಯರು ಮಾತನಾಡಿ, ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ, ಆರೋಗ್ಯ ಕಾರ್ಯಕರ್ತರಿಗೆ ಮತ್ತು ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಿ, ಇನ್ನಷ್ಟು ಆತ್ಮವಿಶ್ವಾಸದಿಂದ ನಿರ್ಭಯವಾಗಿ ಕೋವಿಡ್ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಿದ ಜಿಲ್ಲಾಡಳಿತಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿದರು.

ಕಳೆದ ಬಾರಿಯಂತೆ ಈಗ ಕೋವಿಡ್ ಎರಡನೇಯ ಅಲೆಯನ್ನು ಸಮರ್ಥವಾಗಿ ಎದುರಿಸಿ ಉತ್ತಮ ಚಿಕಿತ್ಸೆ ಹಾಗೂ ಆರೋಗ್ಯ ಸೇವೆಯನ್ನು ನೀಡಲು ಜಿಲ್ಲೆಯ ಸುಮಾರು 20 ಖಾಸಗಿ ಆಸ್ಪತ್ರೆಗಳು ಸಿದ್ಧವಿರುವುದಾಗಿ ಹೇಳಿದರು. ಕೋವಿಡ್ 2ನೇ ಅಲೆಯಿಂದ ಜಿಲ್ಲೆಯನ್ನು ರಕ್ಷಿಸಲು ಜಿಲ್ಲಾಡಳಿತದೊಂದಿಗೆ ಕೈಜೊಡಿಸಿ, ಎಲ್ಲರೂ ಶ್ರಮಿಸುವುದಾಗಿ ವೈದ್ಯರು ಹೇಳಿದರು.

ABOUT THE AUTHOR

...view details