ಧಾರವಾಡ :ಕನ್ನಡದ ಖ್ಯಾತ ವಿಮರ್ಶಕ ಡಾ.ರಾಜೇಂದ್ರ ಚೆನ್ನಿ ಹಾಗೂ ಕವಿ ಡಾ.ಜಿನದತ್ತ ದೇಸಾಯಿಗೆ ದ.ರಾ. ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ಎಚ್.ವಿಶ್ವನಾಥ್ ಅವರು ಪ್ರಶಸ್ತಿ ಪ್ರದಾನ ಮಾಡಿದರು. 2023ನೇ ಸಾಲಿನ ಅಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ಧಾರವಾಡದ ದ.ರಾ ಬೇಂದ್ರೆ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವರಕವಿ ಡಾ.ದ.ರಾ. ಬೇಂದ್ರೆ 127ನೇ ಜನ್ಮದಿನದ ಅಂಗವಾಗಿ ಈ ಪ್ರಶಸ್ತಿ ಕೊಡಲಾಗುತ್ತದೆ. ಡಾ. ದ. ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್ ಸ್ಮಾರಕ ಆಶ್ರಮ ಕೂಡಿ ಮಾಡುವ ಪ್ರಶಸ್ತಿ ಇದಾಗಿದೆ.
ಪ್ರಶಸ್ತಿ ಪ್ರಧಾನ ಬಳಿಕ ಮಾತನಾಡಿದ ಹೆಚ್.ವಿಶ್ವನಾಥ್ ಅವರು, ವೀರಪ್ಪ ಮೊಯ್ಲಿ ಅವರ ಸರ್ಕಾರ ಬೇಂದ್ರೆ ಅವರಿಗೆ ದೊಡ್ಡ ಕೊಡುಗೆ ಕೊಟ್ಟಿದೆ. ಟ್ರಸ್ಟ್ ಮಾಡಲು ಸಹಕಾರ ಕೊಟ್ಟು, ಕಟ್ಟಡ ಕಟ್ಟಲು ಅನುದಾನ ಕೊಟ್ಟರು ಎಂದರು. ಧಾರವಾಡದ ಬೆಣ್ಣೆಗೆ ಧಾರಣೆ ಆಗಲಿಲ್ಲ ಅಂತಾ ಬೇಂದ್ರೆ ಹೇಳಿದ್ದರು. ಹಾಗೂ ಸ್ಥಳೀಯರು ನಮ್ಮನ್ನ ಹೇಗೆ ಒಪ್ಪಿಕೊಳ್ತಾರೆ ಎನ್ನುವುದು ಮುಖ್ಯ. ನನ್ನೂರಿನ ಜನ ನಮ್ಮನ್ನ ಒಪ್ಪಿಕೊಳ್ಳಬೇಕು ಎಂದು ಪಂಪರು ಹೇಳಿದ್ದರು. ಸರ್ಕಾರಕ್ಕೆ ಏನಾದರೂ ಕಣ್ಣು ಮೂಗು ಇದ್ದರೆ ರಾಷ್ಟ್ರೀಯ ಕವಿ ದಿನಾಚರಣೆ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.
ಸಿಎಂ ಬೊಮ್ಮಾಯಿ ಜೊತೆ ಮಾತನಾಡಿ ಇಲ್ಲಿ ಕೊಟ್ಟ ಮನವಿಯನ್ನು ಸಲ್ಲಿಸುತ್ತೇನೆ. ಬೇಂದ್ರೆ ಅವರ ಸಾಹಿತ್ಯ ಸಂಸ್ಕೃತಿ ನೋಡುವಂತೆ ಇದೆ ಎಂದು ಹಳ್ಳಿಹಕ್ಕಿ ಹೆಚ್ ವಿಶ್ವನಾಥ್ ಅವರು ಮೂಡಲ ಮನೆಯ ಮುದ್ದಿನ ನೀರಿನ ಹಾಡು ಹಾಡಿದರು. ಬಳಿಕ ಕನ್ನಡದ ಎರಡು ಕಣ್ಣು ಕುವೆಂಪು ಹಾಗೂ ಅಂಬಿಕಾತನಯದತ್ತರು ಎಂದು ಇಬ್ಬರು ಕವಿಗಳನ್ನು ಬಣ್ಣಿಸಿದರು. ಬೇಂದ್ರೆ ಹೆಸರನ್ನು ನಾಡು ಪ್ರಯೋಜನ ಪಡೆಯಬೇಕು. ನಾನು ಮತ್ತೊಮ್ಮೆ ಬಂದಾಗ ಈ ಬಗ್ಗೆ ಮಾತನಾಡುತ್ತೇನೆ. ಸರ್ಕಾರದಿಂದ ನನಗೆ ಪ್ರತಿ ವರ್ಷ ಎರಡು ಕೋಟಿ ದುಡ್ಡು ಬರುತ್ತೆ. ಅದನ್ನು ನಾನು ಆರೋಗ್ಯ ಶಿಕ್ಷಣಕ್ಕೆ ಕೊಡುತ್ತೇನೆ ಎಂದು ಹೇಳಿದರು.
ಇದೆ ವೇಳೆ ಚೆನ್ನಿ ಹಾಗೂ ಜಿನದತ್ ಅವರಿಗೆ ಪ್ರಶಸ್ತಿ ಕೊಡುವ ಭಾಗ್ಯ ನನಗೆ ಸಿಕ್ಕಿದ್ದು ಸಂತೋಷವಾಗಿದೆ. ಕನ್ನಡದ ಕೆಲಸವನ್ನು ಎಲ್ಲರೂ ಸೇರಿ ಮಾಡೋಣ, ಇದು ಸಾಹಿತಿಗಳು ಒಪ್ಪಿರುವ ಭಾಗ. ಬಂಡಾಯ ಸಾಹಿತ್ಯ, ದಲಿತ ಸಾಹಿತ್ಯ, ಮಹಿಖಾ ಸಾಹಿತ್ಯ ಇವೆ. ರಾಜಕೀಯ ಸಾಹಿತ್ಯ ಬೇಕು. ನಾವು ಜನತಂತ್ರ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂದು ಹೆಚ್ ವಿಶ್ವನಾಥ್ ಹೇಳಿದರು.