ಹುಬ್ಬಳ್ಳಿ: ಅಮಿತ್ ಶಾ ಮಂಡ್ಯಕ್ಕೆ ಬಂದಿದ್ದಾರೆ. ಡಬಲ್ ಎಂಜಿನ್ ಸರ್ಕಾರ ರೈತರಿಗೆ ಡಬಲ್ ಬೆಲೆ ಕೊಡುತ್ತದೆ ಎನ್ನುವುದನ್ನು ಬಹಿರಂಗವಾಗಿ ಹೇಳಬೇಕು. ಬಿಜೆಪಿಯವರು ಜನರಿಗೆ ಚಾಕೊಲೇಟ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಕೇವಲ ಕಣ್ಣೊರೆಸುವುದರಿಂದ ಉಪಯೋಗವಿಲ್ಲ. ಜನರ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೀರಿನ ಬೆಲೆ 23, 24 ರೂ ಇದೆ. ಹಾಲಿನ ಬೆಲೆ 27, 28 ರೂ ಇದೆ. ಅವರಿಗೆ ಏನ್ ಬೆಲೆ ಕೊಡುತ್ತಾರೆ ಎನ್ನುವುದನ್ನು ಹೇಳಬೇಕು. ಅವರು ಸಮಾವೇಶ ಮಾಡಲಿ, ನಮ್ಮದೇನೂ ಅಭ್ಯಂತರ ಇಲ್ಲ. ಹಿಂದೊಮ್ಮೆ ಪೂಜೆ ಮಾಡಿದ್ದರು. ಇವಾಗ ಮತ್ತೆ ಮಾಡ್ತಿದ್ದಾರೆ ಎಂದರು.
ನಮ್ಮ ಸಮಾವೇಶ ನಿಲ್ಲಿಸುವುದಿಲ್ಲ: ಯಾವುದೇ ಕಾರಣಕ್ಕೂ 2 ನೇ ತಾರೀಖಿನ ಸಮಾವೇಶವನ್ನು ನಾವು ನಿಲ್ಲಿಸುವುದಿಲ್ಲ. ಇದೀಗ ಕೃಷ್ಣ ವಿಚಾರವಾಗಿ ಸುರ್ಜೇವಾಲಾ, ಸಿದ್ದರಾಮಯ್ಯ, ನಾನು ಹೋಗ್ತಿದ್ದೀವಿ. ಮುಂದೆ ನಮ್ಮ ಸರ್ಕಾರ ಬಂದೇ ಬರುತ್ತದೆ. ನಾವು ಸಮಸ್ಯೆ ಬಗೆಹರಿಸುತ್ತೇವೆ ಎಂದರು.
ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ವರಿಗೂ ಸಮಬಾಳು, ಸಮಪಾಲು. ಜನಸಂಖ್ಯೆ ಆಧಾರದ ಮೇಲೆ ಎಲ್ಲರೂ ತಮ್ಮ ಹಕ್ಕು ಕೇಳ್ತಾರೆ. ಮೀಸಲಾತಿ ಅಂತಾ ಹೇಳಿ ಬಿಜೆಪಿಯವರು ಚಾಕೊಲೇಟ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಇಂದು ಸಂಜೆ ಸಿದ್ದರಾಮಯ್ಯ, ಮುಖಂಡರ ಜೊತೆ ಚರ್ಚಿಸಿ ನಮ್ಮ ಪಕ್ಷದ ಅಚಲ ನಿರ್ಧಾರ ಪ್ರಕಟಿಸುತ್ತೇವೆ. ಜಾರಿಯಾಗದ ಮೀಸಲಾತಿ ತಂದು ಕರ್ನಾಟಕವನ್ನು ಲಿಟಿಗೇಷನ್ ರಾಜ್ಯ ಮಾಡುತ್ತಿದ್ದಾರೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.