ಹುಬ್ಬಳ್ಳಿ:ರೈತ ಮಹಿಳೆಯೊಬ್ಬರ ಖಾತೆಯಿಂದ ಹಂತ ಹಂತವಾಗಿ 64 ಸಾವಿರ ರೂಪಾಯಿಯನ್ನು ಸೈಬರ್ ವಂಚಕರು ಲಪಟಾಯಿಸಿರುವ ಘಟನೆ ಬೆಳೆಕಿಗೆ ಬಂದಿದೆ. ಕುಂದಗೋಳ ತಾಲೂಕು ಯರಿನಾರಾಯಣಪುರ ಗ್ರಾಮದ ಮಲ್ಲವ್ವ ಅಶೋಕ ಮುಲ್ಲಹಳ್ಳಿ ಎಂಬ ರೈತ ಮಹಿಳೆ ವಂಚನೆಗೊಳಗಾದವರು. ಇವರು ಯರಗುಪ್ಪಿಯ ಕೆವಿಜಿ ಬ್ಯಾಂಕ್ನಲ್ಲಿ ಖಾತೆ ಹೊಂದಿದ್ದಾರೆ. ಅರ್ಧ ಎಕರೆ ಜಮೀನು ಹೊಂದಿರುವ ಇವರು ಕೃಷಿ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಖಾತೆಯಲ್ಲಿ ಗೃಹಲಕ್ಷ್ಮಿ ಸೇರಿದಂತೆ ವಿವಿಧ ಮೂಲದಿಂದ ಉಳಿತಾಯ ಮಾಡಿದ ಹಣವನ್ನು ಇಟ್ಟಿದ್ದರು.
ಇತ್ತೀಚಿಗೆ ಕುಂದಗೋಳ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಖಾಲಿ ನಿವೇಶನ ಖರೀದಿ ಮಾಡಿದ್ದರು. ಆಗ ರಿಜಿಸ್ಟ್ರೇಷನ್ ಸಲುವಾಗಿ ಹೆಬ್ಬೆಟ್ಟು (ಥಂಬ್) ನೀಡಿದ್ದರು. ಅದನ್ನು ಬಿಟ್ಟರೆ ಇವರು ಇಲ್ಲಿಯವರೆಗೂ ಯಾರೊಂದಿಗೂ ಯಾವುದೇ ಬ್ಯಾಂಕ್ ಖಾತೆ ಸೇರಿದಂತೆ ಯಾವುದೇ ಮಾಹಿತಿಯನ್ನು ಫೋನ್ ಸೇರಿದಂತೆ ಮೌಖಿಕವಾಗಿಯೂ ಹಂಚಿಕೊಂಡಿಲ್ಲ. ಅಷ್ಟಿದ್ದರೂ ಇವರ ಖಾತೆಯಿಂದ ಅ.24 ರಿಂದ ನ.1 ರ ವರೆಗೆ ಹಂತ ಹಂತವಾಗಿ 64 ಸಾವಿರ ಹಣ ವರ್ಗಾವಣೆಯಾಗಿದೆ. ಮೂರು ಬಾರಿ 10 ಸಾವಿರ, ಮೂರು ಬಾರಿ 9 ಸಾವಿರ ಹಾಗೂ ಒಂದು ಬಾರಿ 7000 ರೂಪಾಯಿಯನ್ನು ವರ್ಗಾವಣೆ ಮಾಡಿಕೊಂಡು ವಂಚನೆ ಮಾಡಲಾಗಿದೆ.
ಈ ಕುರಿತಂತೆ ವಂಚನೆಗೊಳಗಾದ ಮಹಿಳೆ ಬ್ಯಾಂಕ್ ನಲ್ಲಿ ವಿಚಾರಿಸಿದಾಗ, ಬ್ಯಾಂಕ್ ಸಿಬ್ಬಂದಿ ನಮ್ಮಲ್ಲಿ ಯಾವುದೇ ಸಮಸ್ಯೆಯಾಗಿಲ್ಲ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ತಿಳಿಸಿದ್ದಾರೆ. ಇದರಿಂದ ದಿಕ್ಕು ತೋಚದಂತಾದ ಮಹಿಳೆ ಧಾರವಾಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ಮನವಿ ಸಲ್ಲಿಸಿದ್ದಾರೆ.