ಧಾರವಾಡ:ಲೋಡ್‌ಶೆಡ್ಡಿಂಗ್ ಬಗ್ಗೆ ಮಾಜಿ ಶಾಸಕ ಸಿ ಟಿ ರವಿ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಸಚಿವ ಶಿವರಾಜ್ ತಂಗಡಗಿ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ''ಸಿ ಟಿ ರವಿ ಅವರಿಗೆ ಸಮಾಧಾನವೇ ಇಲ್ಲ, ಸರ್ಕಾರ ಬಂದು ಕೆಲವೇ ತಿಂಗಳಾಗಿದ್ದು, ಈಗಾಗಲೇ ಗ್ಯಾರಂಟಿ ಕೊಡುತ್ತಿದ್ದೇವೆ. ಗ್ಯಾರಂಟಿ ಕೊಡುವವರೆಗೂ ಸಮಾಧಾನ ಇಲ್ಲ. ಮಳೆಯಾಗದ ಕಾರಣಕ್ಕೆ ಯಾವ ಅಣೆಕಟ್ಟೆಗಳೂ ತುಂಬಿಲ್ಲ. ಸತ್ಯ ತಿಳಿದುಕೊಂಡು ಮಾತನಾಡುವುದು ಯೋಗ್ಯವಾಗುತ್ತದೆ'' ಎಂದು ಹರಿಹಾಯ್ದರು.
ಒಂದೆರಡು ವರ್ಷ ಬಿಜೆಪಿ ಸಮಾಧಾನದಿಂದ ಇರಬೇಕು:''ಅವರು ಮನಸ್ಸಿಗೆ ಬಂದಂತೆ ಮಾತನಾಡಬಾರದು. ಲೋಡ್ ಶೆಡ್ಡಿಂಗ್ ಒಂದೆರಡು ದಿನ ಹೆಚ್ಚು ಕಮ್ಮಿ ಆಗೋದೆ. ಒಂದೆರಡು ಸಲ ಆದ ತಕ್ಷಣ ಸರ್ಕಾರವನ್ನು ಹೊಣೆ ಮಾಡುವುದಾ? ಐದು ವರ್ಷ ಇವರೇನು ಮಾಡಿದರು. ಮೋದಿ ಅವರನ್ನು ಗಲ್ಲಿ ಗಲ್ಲಿ, ಬೀದಿ ಬೀದಿ ತಿರುಗಿಸಿದರು. ಆದರೂ 66 ಸ್ಥಾನಕ್ಕೆ ನಿಂತರು. ಒಂದೆರಡು ವರ್ಷ ಬಿಜೆಪಿ ಸಮಾಧಾನದಿಂದ ಇರಬೇಕು. ಐದು ವರ್ಷದಲ್ಲಿ ವರ್ಷಕ್ಕೊಂದು ಗ್ಯಾರಂಟಿ ಅಂತಾ ಇವರು ತಿಳಿದಿದ್ದರು. ಮೂರು ತಿಂಗಳಲ್ಲಿ ಮೂರು ಗ್ಯಾರಂಟಿ ಕೊಟ್ಟಿದೇವೆ. ನಾಲ್ಕನೇ ಗ್ಯಾರಂಟಿ ಕೊಡಲು ಹೊರಟಿದ್ದೇವೆ. ಹೀಗೆ ಆದರೆ, ಮುಂದೆ ಹೇಗೆ ಅನ್ನೋ ಚಿಂತೆ ಕಾಡುತ್ತಿದೆ'' ಎಂದರು.
''ಮುಂದೆ ರಾಜಕೀಯ ಜೀವನ ಹೇಗೆ ಎಂಬ ಆತಂಕ ಶುರುವಾಗಿದೆ. ಅವರ ಪಕ್ಷದಲ್ಲಿನ ಎಂಎಲ್‌ಎಗಳೇ ಈಗ ಹೊರಗೆ ಹೊರಟಿದ್ದಾರೆ. ಬಿಜೆಪಿ ಖಾಲಿಯಾದರೆ ಮುಂದೆ ಹೇಗೆ ಎಂಬ ಟೆನ್ಷನ್ ಇದೆ. ಆ ಟೆನ್ಷನ್‌ದಲ್ಲಿ ಸಿ ಟಿ ರವಿ ಮಾತನಾಡುತ್ತಿದ್ದಾರೆ. ಸಿ ಟಿ ರವಿ ಬಹಳ ಟೆನ್ಷನ್ ತಗೋಬೇಡಿ ವರ್ಷ, ಎರಡು ವರ್ಷ ಆದ ಮೇಲೆ ಮಾತನಾಡಿ'' ಎಂದು ವ್ಯಂಗ್ಯವಾಡಿದರು.