ಹುಬ್ಬಳ್ಳಿ : ಮುಖ್ಯಮಂತ್ರಿಯವರ ತವರು ಹುಬ್ಬಳ್ಳಿ-ಧಾರವಾಡದಲ್ಲಿ ರೌಡಿಗಳ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊಲೆ, ಕೊಲೆ ಯತ್ನ, ಹಲ್ಲೆಯಂಥ ಪ್ರಕರಣಗಳ ಸಂಖ್ಯೆ ಏರುತ್ತಲೇ ಇದೆ. ಚಾಕು, ಚೂರಿ, ತಲ್ವಾರ್, ಮತ್ತಿತರ ಮಾರಕಾಸ್ತ್ರಗಳು ಇಲ್ಲಿ ಆಟಿಕೆಯ ವಸ್ತುಗಳಂತಾಗಿವೆ. ಕೇವಲ ಎರಡೂವರೆ ವರ್ಷಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳಲ್ಲಿ ಒಟ್ಟು 38 ಕೊಲೆಗಳು ನಡೆದಿವೆ.
ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹಳೇ ಹುಬ್ಬಳ್ಳಿ ಕೋಮು ಗಲಭೆ ನಂತರ ಹುಬ್ಬಳ್ಳಿಯಲ್ಲಿ ಮೇಲಿಂದ ಮೇಲೆ ನೆತ್ತರು ಹರಿಯುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆ ಇತ್ತೀಚೆಗೆ ನಡೆದ ಖ್ಯಾತ ಸರಳ ವಾಸ್ತು ತಜ್ಞ ಚಂದ್ರಶೇಖರ್ ಗುರೂಜಿಯವರ ಹತ್ಯೆ. ಹೆಣ್ಣು, ಹೊನ್ನು, ಮಣ್ಣು ವಿಚಾರವಾಗಿ ಒಂದಷ್ಟು ಕೊಲೆಗಳು ನಡೆದಿದ್ದರೆ, ಮತ್ತಷ್ಟು ಕೊಲೆಗಳು ಮೀಟರ್ ಬಡ್ಡಿ, ಹಳೇ ವೈಷಮ್ಯದ ವಿಚಾರ, ಗುಟ್ಟಾ, ಸಿಗರೇಟ್, ಎಗ್‌ರೈಸ್‌ನಂತಹ ಕುಲ್ಲಕ ಕಾರಣಕ್ಕೂ ನೆತ್ತರು ಹರಿದಿರುವುದು ವಿಪರ್ಯಾಸ. ಅಷ್ಟೇ ಅಲ್ಲದೇ ಸ್ನೇಹದಲ್ಲಿಯೇ ಕ್ಷುಲ್ಲಕ ಕಾರಣಕ್ಕೆ ಕೊಲೆಯ ಯತ್ನಗಳು ಸಹ ನಡೆದಿವೆ.
ಕ್ಷುಲ್ಲಕ ಕಾರಣಕ್ಕೆ ಕೊಲೆ ಪ್ರಕರಣಗಳು: ಪ್ರೀತಿ-ಪ್ರೇಮ ವಿಷಯಕ್ಕೆ ಸಂಬಂಧಿಸಿದಂತೆ ಅದೆಷ್ಟೋ ಕೊಲೆ ನಡೆದಿವೆ. ಮನೆಯ ವಿರೋಧದ ನಡುವೆಯೂ ಮದುವೆಯಾದ ಮಗಳನ್ನು ಅಪಹರಿಸಿದ ತಂದೆ, ತಾನು ಪ್ರೀತಿಸುತ್ತಿದ್ದ ಹುಡುಗಿಯ ಜೊತೆ ಅನ್ಯೋನ್ಯವಾಗಿದ್ದ ಕಾರಣಕ್ಕೆ ನಿರ್ಜನ ಪ್ರದೇಶದಲ್ಲಿ ಯುವಕನ ಕೊಲೆ, ತಂಗಿಯನ್ನು ಚುಡಾಯಿಸಿದ ಕಾರಣಕ್ಕೆ ಕೊಲೆ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಹುಬ್ಬಳ್ಳಿಯಲ್ಲಿ ನೆತ್ತರು ಹರಿಯುತ್ತಲೇ ಇದೆ.