ಧಾರವಾಡ: ಮಗಳನ್ನು ಪ್ರೀತಿ ಮಾಡುತ್ತಿದ್ದ ಯುವಕನೋರ್ವನಿಗೆ ತಂದೆ ಚಾಕು ಇರಿದ ಘಟನೆ ಧಾರವಾಡದ ಸೈದಾಪುರ ಬಡಾವಣೆಯ ಅಂಭಾ ಭವಾನಿ ದೇವಸ್ಥಾನದ ಎದುರಿಗೆ ನಡೆದಿದೆ.
ಸೈದಾಪುರ ಗೌಡರ ಓಣಿಯ ಶಶಾಂಕ ಮೂಗಣ್ಣವರ ಎಂಬ ಯುವಕ ಹಲ್ಲೆಗೊಳಗಾಗಿದ್ದು, ಸುತಗಟ್ಟಿ ಓಣಿಯ ಹುಲಗಪ್ಪ ಎಂಬಾತ ಚಾಕುವಿನಿಂದ ಇರಿದಿದ್ದಾನೆ. ಯುವಕನ ಸ್ಥಿತಿ ಚಿಂತಾಜನಕವಾಗಿದೆ. ಕಳೆದ ಒಂದೂವರೆ ವರ್ಷದಿಂದ ಶಶಾಂಕ ಎಂಬ ಯುವಕ ಹುಲಗಪ್ಪನ ಮಗಳನ್ನ ಪ್ರೀತಿಸುತ್ತಿದ್ದ. ಇದರಿಂದ ರೋಸಿ ಹೋಗಿ ಹೀಗೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಕಾಲೇಜಿಗೆ ಹೋಗುತ್ತಿದ್ದ ಮಗಳ ಜೊತೆ ಸುತ್ತಾಡುತ್ತಿದ್ದನ್ನು ಗಮನಿಸಿದ ಹುಡುಗಿ ತಂದೆ ಹುಲಗಪ್ಪ ಯುವಕನಿಗೆ ಎರಡು ಮೂರು ಬಾರಿ ಎಚ್ಚರಿಕೆ ಸಹ ನೀಡಿದ್ದನಂತೆ. ಆದರೂ ಇವರ ಪ್ರೀತಿ ಕಡಿಮೆಯಾಗಿರಲಿಲ್ಲಾ. ಹೀಗಾಗಿ ಇಂದು ಸಂಜೆ ಸ್ನೇಹಿತರ ಜೊತೆ ಕುಳಿತಾಗ ಏಕಾಏಕಿ ಬಂದು ಜಗಳ ತೆಗದು ಹೊಟ್ಟೆ ಭಾಗದಲ್ಲಿ ಚಾಕು ಇರಿದು ಪರಾರಿಯಾಗಿದ್ದಾನೆ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನೆ: ಸಂಜೆವರೆಗೆ ಮನೆಯಲ್ಲಿದ್ದ ಶಶಾಂಕ ಸಂಜೆ ವೇಳೆ ಸ್ನೇಹಿತರ ಜೊತೆ ಕುಳಿತಾಗ ಈ ಘಟನೆ ಸಂಭವಿಸಿದೆ. ಶಶಾಂಕ ಗುಜರಿ ಅಂಗಡಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಎಂದು ತಿಳಿದುಬಂದಿದೆ. ಚಾಕು ಇರಿದ ತಕ್ಷಣ ಜಿಲ್ಲಾಸ್ಪತ್ರೆಗೆ ತರಲಾಗಿತ್ತು. ಆದ್ರೆ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.
ವ್ಯಕ್ತಿಗೆ ಚಾಕು ಇರಿತ: ಇನ್ನೊಂದೆಡೆ ಸಿಲಿಕಾನ್ ಸಿಟಿಯಲ್ಲಿ ಪುಡಿ ರೌಡಿಗಳ ಅಟ್ಟಹಾಸ ಮಿತಿ ಮೀರುತ್ತಿದೆ. ಕಂಡ ಕಂಡಲ್ಲಿ ಜನರನ್ನು ಅಡ್ಡ ಹಾಕುವ ಕಿರಾತಕರು ಹಲ್ಲೆ ಮಾಡಿ ಉದ್ಧಟತನ ತೋರುತ್ತಿದ್ದಾರೆ. ಇದೇ ರೀತಿ ಹವಾ ಮೈಂಟೇನ್ ಮಾಡಲು ಅಟ್ಟಹಾಸ ಮೆರೆದಿದ್ದ ರೌಡಿಶೀಟರ್ ಕೈಗೆ ಗಿರಿನಗರ ಪೊಲೀಸ್ ಠಾಣೆಯ ಪೊಲೀಸರು ಕೈಕೋಳ (ಏಪ್ರಿಲ್ 27-2023) ತೊಡಿಸಿದ್ದರು.
ರೌಡಿಶೀಟರ್ ನರಸಿಂಹ ಅಲಿಯಾಸ್ ಕೂಸೆ, ಸಹಚರ ಕಾಂತರಾಜ್ ಬಂಧಿತರು. ಕೃತ್ಯದಲ್ಲಿ ಭಾಗಿಯಾಗಿದ್ದ ಯೋಗೇಶ್ ಸೇರಿ ಮೂವರ ವಿರುದ್ಧ ತಲೆಮರೆಸಿಕೊಂಡಿದ್ದು ಶೋಧಕಾರ್ಯ ನಡೆಸಲಾಗುತ್ತಿತ್ತು. ಆರೋಪಿಗಳ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದರು.
ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ: ಆರೋಪಿ ನರಸಿಂಹ ಏರಿಯಾದಲ್ಲಿ ಹವಾ ಮೆಂಟೇನ್ ಮಾಡಬೇಕು, ಪೊಲೀಸರಿಗೆ ತನ್ನ ಬಗ್ಗೆ ಮಾಹಿತಿ ಕೊಡುವವರಿಗೆ ಬುದ್ಧಿ ಕಲಿಸಬೇಕು ಎಂದು ನಿರ್ಧರಿಸಿದ್ದ. ಹಾಗಾಗಿ ಏಪ್ರಿಲ್ 25ರ ರಾತ್ರಿ ಗಿರಿ ನಗರದಲ್ಲಿದ್ದ ತನ್ನ ಪಾಡಿಗೆ ತಾನು ನಡೆದುಕೊಂಡು ಹೋಗ್ತಿದ್ದ ವೆಂಕಟೇಶ್ ಎಂಬಾತನಿಗೆ ಚಾಕು ಇರಿದಿದ್ದ. ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದಿಷ್ಟೇ ಅಲ್ಲ, ಅದೇ ದಿನ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ರಸ್ತೆಯಲ್ಲಿ ಬರುತ್ತಿದ್ದ ಕಾರನ್ನು ಅಡ್ಡಗಟ್ಟಿದ್ದ ನರಸಿಂಹ, ಕಾಂತರಾಜು ಮತ್ತು ಯೋಗೇಶ್ ಟೀಂ ಕಾರು ಚಾಲಕ ನಿತೀಶ್ ಎಂಬಾತನಿಗೆ ಮನ ಬಂದಂತೆ ಥಳಿಸಿದ್ದರು. ಅಷ್ಟೇ ಅಲ್ಲ, ಗಾಂಜಾ ನಶೆಯಲ್ಲಿದ್ದ ಆರೋಪಿಗಳು ರಾಡ್ನಿಂದ ಕಾರ್ ಗ್ಲಾಸ್ಗಳನ್ನು ಒಡೆದು ಪುಡಿ ಪುಡಿ ಮಾಡಿ ಅಟ್ಟಹಾಸ ಮೆರೆದಿದ್ದರು.
ಇದನ್ನೂ ಓದಿ:ಬೆಂಗಳೂರಲ್ಲಿ ಪುಡಿರೌಡಿಗಳ ಅಟ್ಟಹಾಸ: ವ್ಯಕ್ತಿಗೆ ಚಾಕು ಇರಿತ, ಕಾರ್ ಗ್ಲಾಸ್ ಒಡೆದು ಪುಂಡಾಟ