ಕರ್ನಾಟಕ

karnataka

ETV Bharat / state

ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸಲು ಕಾರ್ಯಪಡೆ ರಚನೆ: ಸಚಿವ ಶೆಟ್ಟರ್​ - ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸಲು ಕಾರ್ಯಪಡೆ

ಕೊರೊನಾ ಹರಡುವಿಕೆ ನಂತರ ಜಪಾನ್, ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಚೀನಾ ಬಗ್ಗೆ ಅಸಮಾಧಾನ ಹೊಂದಿವೆ. ಚೀನಾದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ಅಲ್ಲಿಂದ ಬೇರೆ ದೇಶಗಳಿಗೆ ಸ್ಥಳಾಂತರಿಸಲು ಚಿಂತನೆ ನಡೆಸಿವೆ.

Minister Jagadish Shettar
ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸಲು ಕಾರ್ಯಪಡೆ ರಚನೆ: ಸಚಿವ ಜಗದೀಶ ಶೆಟ್ಟರ್

By

Published : May 9, 2020, 5:55 PM IST

ಧಾರವಾಡ: ಕೊರೊನಾ ವಿಶ್ವವ್ಯಾಪಿಯಾಗಿ ಹರಡುತ್ತಿರುವ ಮಧ್ಯೆ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಚೀನಾದಿಂದ ಹೊರ ಬರಲು ಮುಂದಾಗಿವೆ. ಮುಂಬರುವ ಒಂದು ವರ್ಷದ ಅವಧಿಯಲ್ಲಿ ದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಅಂತಾರಾಷ್ಟ್ರೀಯ ಬಂಡವಾಳ ಹೂಡಿಕೆದಾರರು ಉತ್ಸುಕರಾಗಿದ್ದಾರೆ. ಇವರನ್ನು ಸೆಳೆಯಲು ರಾಜ್ಯ ಸರ್ಕಾರದಿಂದ ಪ್ರತ್ಯೇಕ ಕಾರ್ಯಪಡೆ ರಚಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್ ಹೇಳಿದರು.

ಬಹುರಾಷ್ಟ್ರೀಯ ಕಂಪನಿಗಳನ್ನು ಆಕರ್ಷಿಸಲು ಕಾರ್ಯಪಡೆ ರಚನೆ: ಸಚಿವ ಜಗದೀಶ್​ ಶೆಟ್ಟರ್
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕೊರೊನಾ ನಿಯಂತ್ರಣ, ಲಾಕ್​ಡೌನ್ ಸಡಿಲಿಕೆ ಕುರಿತ ಪರಿಶೀಲನೆ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಆಟೋ ಮೊಬೈಲ್ ಸೇರಿದಂತೆ ಹಲವು ಉದ್ಯಮಗಳಲ್ಲಿ ಕರ್ನಾಟಕ ರಾಜ್ಯ ದೇಶದ ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ಕೊರೊನಾ ಹರಡುವಿಕೆ ನಂತರ ಜಪಾನ್, ಅಮೆರಿಕ ಸೇರಿದಂತೆ ಅನೇಕ ರಾಷ್ಟ್ರಗಳು ಚೀನಾ ಬಗ್ಗೆ ಅಸಮಾಧಾನ ಹೊಂದಿವೆ. ಚೀನಾದಲ್ಲಿರುವ ಬಹುರಾಷ್ಟ್ರೀಯ ಕಂಪನಿಗಳನ್ನು ಅಲ್ಲಿಂದ ಬೇರೆ ದೇಶಗಳಿಗೆ ಸ್ಥಳಾಂತರಿಸಲು ಚಿಂತನೆ ನಡೆಸಿವೆ. ಜಪಾನ್ ದೇಶವು ಚೀನಾದಿಂದ ಹೊರ ಬರುವ ಕಂಪನಿಗಳಿಗೆ ಆರ್ಥಿಕ ನೆರವನ್ನೂ ಕೂಡ ಘೋಷಣೆ ಮಾಡಿದೆ. ನೂರಾರು ಅಂತಾರಾಷ್ಟ್ರೀಯ ಹೂಡಿಕೆದಾರರು ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ಬಂಡವಾಳ ಹೂಡಲು ತಾತ್ವಿಕವಾಗಿ ಉತ್ಸುಕರಾಗಿದ್ದಾರೆ. ಅವರನ್ನು ಸೆಳೆಯಲು ರಾಜ್ಯದ ಪ್ರಮುಖ ಉದ್ಯಮಿಗಳಾದ ನಂದನ್ ನಿಲೇಕಣಿ, ಕಿರಣ್ ಮುಜುಂದಾರ್ ಷಾ, ಇನ್ಫೋಸಿಸ್ ಹಾಗೂ ವಿವಿಧ ಕೈಗಾರಿಕೋದ್ಯಮಿಗಳ ಸಂಘಟನೆಗಳ ಪದಾಧಿಕಾರಿಗಳನ್ನೊಳಗೊಂಡ ವಿಶೇಷ ಕಾರ್ಯಪಡೆ ರಚಿಸಲು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಪ್ರಸ್ತಾವನೆ ತಯಾರಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದಾರೆ. ಶೀಘ್ರದಲ್ಲಿಯೇ ಈ ಕಾರ್ಯಪಡೆ ಮೂಲಕ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸುವ ಕಾರ್ಯಗಳು ಪ್ರಾರಂಭವಾಗಲಿವೆ ಎಂದರು.ಬೃಹತ್, ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ:ಹಲವು ಕೈಗಾರಿಕೆಗಳು ಈ ಸಂಕಷ್ಟ ಎದುರಿಸಲು ಕಡಿಮೆ ಬಡ್ಡಿ ದರದಲ್ಲಿ ದುಡಿಯುವ ಬಂಡವಾಳ, ಕಾರ್ಮಿಕರಿಗೆ ಏಪ್ರಿಲ್ ತಿಂಗಳ ವೇತನ ನೀಡಲು ಶೂನ್ಯ ಬಡ್ಡಿ ದರದಲ್ಲಿ ಸಾಲ ಹಾಗೂ ಒ‌ಂದು ವರ್ಷದ ನಂತರ ಈ ಸಾಲಗಳ ಮರುಪಾವತಿ ಕೈಗೊಳ್ಳಲು ಮನವಿ ಮಾಡಿವೆ. ಈ ಬೇಡಿಕೆಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದರು.ವಿಶೇಷ ಪ್ಯಾಕೇಜ್ ಅಭಿನಂದನೀಯ:ಕ್ಷೌರಿಕರು, ಮಡಿವಾಳರು, ಹೂವು, ತರಕಾರಿ, ಹಣ್ಣು ಬೆಳೆಗಾರರು, ಆಟೋ ರಿಕ್ಷಾ ಚಾಲಕರು, ಕಾರ್ಮಿಕರು ಸೇರಿದಂತೆ ಹಲವು ವರ್ಗಗಳ ಜನರಿಗೆ ಸರ್ಕಾರ ನೆರವಿನ ಪ್ಯಾಕೇಜುಗಳನ್ನು ಘೋಷಿಸಿರುವ ಕ್ರಮಕ್ಕೆ ವ್ಯಾಪಕ ಸ್ವಾಗತ ಮತ್ತು ಅಭಿನಂದನೆ ವ್ಯಕ್ತವಾಗಿದೆ. ಇದು ಜನಪರವಾದ ಆಡಳಿತಕ್ಕೆ ಸಿಕ್ಕ ಮೆಚ್ಚುಗೆಯಾಗಿದೆ ಎಂದರು.ವೈದ್ಯರು, ಜಿಲ್ಲಾಡಳಿತದ ಕಾರ್ಯ ಪ್ರಶಂಸನೀಯ:ಕೊರೊನಾ ವಿರುದ್ಧ ಹೋರಾಡಲು ಕೇಂದ್ರ ಸರ್ಕಾರ ಸೂಚಿಸುವ ಪ್ರತಿ ಹಂತಗಳ ಮಾರ್ಗಸೂಚಿಗಳನ್ನು ಜಿಲ್ಲೆಯಲ್ಲಿ ಅತ್ಯಂತ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಿಮ್ಸ್, ಮಹಾನಗರ ಪಾಲಿಕೆ ಪೌರಕಾರ್ಮಿಕರು, ಮಹಾನಗರ ಪೊಲೀಸ್ ಆಯುಕ್ತರು, ಜಿಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಕಾರ್ಮಿಕ, ಆಹಾರ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಾರ್ತಾ ಇಲಾಖೆ ಸೇರಿದಂತೆ ಮೊದಲಾದ ಅಗತ್ಯ ಸೇವೆಗಳ ಇಲಾಖೆಗಳ ಜೊತೆಗೆ ಮಾಧ್ಯಮಗಳು ಕೂಡ ಜಿಲ್ಲೆಯಲ್ಲಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿದ ಪರಿಣಾಮವಾಗಿ ಇಂದು ಉಳಿದ ಜಿಲ್ಲೆಗಳಿಗೆ ಹೋಲಿಸಿದಾಗ ಧಾರವಾಡದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಒಗ್ಗೂಡಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕಾರ್ಯ ಅಭಿನಂದನೀಯ ಎಂದರು.

ABOUT THE AUTHOR

...view details