ಹುಬ್ಬಳ್ಳಿ: ರೂಪಾಂತರಗೊಂಡಿರುವ ಮಹಾಮಾರಿ ಸಣ್ಣ ವ್ಯಾಪಾರಿಗಳ ಮೇಲೆ ದುಷ್ಪರಿಣಾಮ ಬೀರಿದೆ. ದಿನದ ದುಡಿಮೆಯನ್ನೇ ನಂಬಿ ಜೀವನ ನಿರ್ವಹಣೆ ಮಾಡುತ್ತಿದ್ದ ವ್ಯಾಪಾರಿಗಳೀಗ ತೀವ್ರ ಕಷ್ಟ ಅನುಭವಿಸುವಂತಾಗಿದೆ. ಹೌದು, ಎರಡನೇ ಅಲೆಯ ಭೀತಿಯಿಂದಾಗಿ ಸಣ್ಣ-ಪುಟ್ಟ ವ್ಯಾಪಾರಿಗಳು, ಬೀದಿ ಬದಿಯ ವ್ಯಾಪಾರಸ್ಥರು ಮತ್ತೆ ಸಂಕಷ್ಟದ ಸುಳಿಯಲ್ಲಿದ್ದಾರೆ.
ಮೊದಲ ಹಂತದ ಕೊರೊನಾದಲ್ಲೇ ಆರ್ಥಿಕತೆಯ ಪ್ರತಿ ಕ್ಷೇತ್ರವೂ ನಲುಗಿ ಹೋಗಿತ್ತು. ಇನ್ನೇನು ಹಂತ ಹಂತವಾಗಿ ಚೇತರಿಕೆ ಕಾಣುವ ಹೊತ್ತಿಗೆ ಎರಡನೇ ಅಲೆ ಸಣ್ಣ ವ್ಯಾಪಾರಿಗಳ ಮೇಲೆ ಬರಸಿಡಿಲಿನಂತೆ ಅಪ್ಪಳಿಸಿದೆ. ಸರ್ಕಾರವೇನೋ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದೆ. ಆದ್ರೆ ಜನರು ಕೊರೊನಾ ಹಾಗೂ ಪೊಲೀಸರ ಭಯದಿಂದ ಮನೆಯಿಂದ ಹೊರಬಂದು ವ್ಯಾಪಾರ ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಇನ್ನು ಹೂ, ಹಣ್ಣು ವ್ಯಾಪಾರಿಗಳ ಬದುಕು ಮತ್ತಷ್ಟು ದುಸ್ತರವಾಗಿದೆ. ನಿತ್ಯ ನೂರಾರು ರೂಪಾಯಿ ವ್ಯಯಿಸಿ ಹೂ, ಹಣ್ಣು, ತರಕಾರಿಯನ್ನು ಎಪಿಎಂಸಿಯಿಂದ ತಗೆದುಕೊಂಡು ಬಂದು ಅದನ್ನು ಮಾರಲು ಹರಸಾಹಸ ಪಡಬೇಕಾಗಿದೆ.
ಸಣ್ಣ-ಪುಟ್ಟ ವ್ಯಾಪಾರಸ್ಥರ ಮೇಲೆ ಕೋವಿಡ್-ಲಾಕ್ಡೌನ್ ಎಫೆಕ್ಟ್ ಕಷ್ಟಪಟ್ಟು ತಂದ ಹೂ, ಹಣ್ಣು, ತರಕಾರಿ ಮಾರುವಷ್ಟರಲ್ಲಿ ಸರ್ಕಾರ ನೀಡಿದ ಸಮಯ ಮುಕ್ತಾಯವಾಗುತ್ತದೆ. ಮಾರ್ಕೆಟ್ನತ್ತ ಜನರು ಸುಳಿಯುವದಿಲ್ಲ, ಮಾರುವುದಕ್ಕೂ ಅವಕಾಶವಿಲ್ಲ. ಹೀಗಾಗಿ ಹೂ, ಹಣ್ಣು, ತರಕಾರಿ ಮಾರಾಟವಾಗದೇ ಕೊಳೆತು ಹೋಗುತ್ತದೆ. ಇದರಿಂದ ನಿತ್ಯ ನೂರಾರು ರೂಪಾಯಿ ನಷ್ಟ ಅನುಭಿಸುವ ಸ್ಥಿತಿ ಇದೆ ಎಂದು ವ್ಯಾಪಾರಸ್ಥರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಹಣ್ಣು ವ್ಯಾಪಾರಿ ಅಜಮ್ಮ ಮಾತನಾಡಿ, ಲಾಕ್ಡೌನ್ನಿಂದ ದುಡಿಯುವ ಮಕ್ಕಳು ಮನೆಯಲ್ಲಿ ಕುಳಿತಿದ್ದಾರೆ. ನಾವೂ ದುಡಿಮೆ ನಿಲ್ಲಿಸಿದರೆ ಮುಂದೇನು? ಲಾಭ ಇರಲಿ, ಹಾಕಿದ ಬಂಡವಾಳವೂ ಕೈಸೇರುತ್ತಿಲ್ಲ. ಮಾರಲು ತಂದ ಹಣ್ಣುಗಳು ಕೊಳೆತು ಹೋಗುತ್ತಿವೆ. ದಿನದ ಉತ್ಪತ್ತಿ ಇಲ್ಲದೇ ಜೀವನ ನಿರ್ವಹಣೆ ಕಷ್ಟಕರವಾಗಿದೆಯೆಂದು ತಿಳಿಸಿದರು.
ಕಿರಾಣಿ ಅಂಗಡಿ ಮಾಲೀಕ ಚೇತನ್ ಮಾತನಾಡಿ, ಬೆಳಗ್ಗೆ ನಿಗದಿಪಡಿಸಿರುವ ಅವಧಿಯಲ್ಲಿ ಉತ್ತಮ ವ್ಯಾಪಾರವಿಲ್ಲ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಎಲ್ಲರಿಗೂ ಸಮಸ್ಯೆ ಆಗಿದೆ. ಯಾಕಿಷ್ಟು ಬೆಲೆ ಎಂದು ಗ್ರಾಹಕರು ನಮ್ಮಲ್ಲಿ ಗಲಾಟೆ ಮಾಡುತ್ತಾರೆ. ಮೊದಲಿನಂತೆ ಹೆಚ್ಚಿನ ವಸ್ತುಗಳು ವ್ಯಾಪಾರವಾಗಲ್ಲ. ಅದರ ಅವಧಿ ಮುಗಿದರೆ ಮತ್ತೆ ನಾವದನ್ನು ಮಾರಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ದಿಢೀರ್ ಕಡಿಮೆಯಾದ್ರಾ ಬಾಂಗ್ಲಾ ದೇಶದ ಪ್ರಜೆಗಳು?