ಹುಬ್ಬಳ್ಳಿ: ಕೋವಿಡ್ ಎರಡನೇ ಅಲೆ ಹೊಡೆತಕ್ಕೆ ಹುಬ್ಬಳ್ಳಿ-ಧಾರವಾಡ ವ್ಯಾಪಾರಸ್ಥರು ಕಂಗಾಲಾಗಿ ಹೋಗಿದ್ದಾರೆ. ಹೌದು, ಕೋವಿಡ್ ಎರಡನೇ ಅಲೆ ಭಾರಿ ಹೊಡೆತ ನೀಡಿದೆ. ಇನ್ನೇನು ಕೊರೊನಾ ಮಾರಿ ಹೋಯಿತು ಎಂದು ನಿಟ್ಟುಸಿರು ಬಿಡುವ ಮುನ್ನವೇ ಕೋವಿಡ್ ಎರಡನೇ ಅಲೆ ಅರ್ಭಟ ಆರಂಭವಾಗಿ ವ್ಯಾಪಾರೋದ್ಯಮವನ್ನು ನಡುಗಿಸಿದೆ.
ಎರಡನೇ ಅಲೆಯ ಭೀತಿಯಿಂದಾಗಿ ವ್ಯಾಪಾರ ವಹಿವಾಟು ಮತ್ತೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ. ಈಗಾಗಲೇ ಮೊದಲ ಹಂತದ ಕೊರೊನಾ ಹೊಡೆತಕ್ಕೆ ನೆಲಕಚ್ಚಿದ್ದ ವ್ಯಾಪಾರೋದ್ಯಮ ಹಂತ ಹಂತವಾಗಿ ಚೇತರಿಕೆ ಕಂಡರೂ ಸಂಪೂರ್ಣ ಸುಧಾರಿಸಿಕೊಳ್ಳುವ ಸಮಯದಲ್ಲಿ ಎರಡನೇ ಅಲೆ ಶಾಕ್ ನೀಡಿದೆ. ಅದರಲ್ಲೂ ಬಟ್ಟೆ ಅಂಗಡಿಗಳು, ಆಭರಣ ಅಂಗಡಿಗಳು, ಟೈಲರಿಂಗ್ ಶಾಪ್ಗಳು, ಹೋಟೆಲ್‌ಗಳು, ಜೆರಾಕ್ಸ್ ಕೇಂದ್ರಗಳು, ಆಟಿಕೆ ಅಂಗಡಿಗಳು, ಬೇಕರಿಗಳು, ಟೈಲರ್‌ಗಳು ಮುಂತಾದ ಅಂಗಡಿಗಳಿಗೆ ಬೀಗ ಬಿದ್ದಿದೆ.
ಕಟ್ಟುನಿಟ್ಟಿನ ನಿಯಮ ಜಾರಿ ಮಾಡಿದ್ದರಿಂದ ಬಾಗಿಲು ಹಾಕಲಾಗಿದೆ. ಅದರಲ್ಲೂ ಈಗ ಮದುವೆ ಸೀಸನ್ ಆಗಿದ್ದು, ಅತಿ ಹೆಚ್ಚು ಜವಳಿ ಹಾಗೂ ಬಂಗಾರದ ಆಭರಣಗಳ ಅಂಗಡಿಗಳು ಗ್ರಾಹಕರಿಂದ ತುಂಬಿಕೊಳ್ಳುತ್ತಿದ್ದವು. ಆದ್ರೀಗ ಕೊರೊನಾ ಕಾರಣ ಅದಕ್ಕೆ ಅವಕಾಶವಿಲ್ಲ. ಹೀಗಾಗಿ ಅಂಗಡಿಗಳಿಗೆ ಬೀಗ ಹಾಕಲಾಗಿದ್ದು, ಮಾಲೀಕರು ಅಂಗಡಿ ಬಾಡಿಗೆ ಕಟ್ಟುವುದು ಕಷ್ಟವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.