ಹುಬ್ಬಳ್ಳಿ : ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೊನಾ ವೈರಸ್ ನೇತ್ರದಾನಿಗಳ ಮೇಲೂ ಕೆಂಗಣ್ಣು ಬೀರಿದ್ದು, ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡ ನೂರಾರು ಜನರ ಕಣ್ಣುಗಳು ಸೋಂಕಿನ ಹಿನ್ನೆಲೆ ಮಣ್ಣು ಪಾಲಾಗುತ್ತಿದೆ.
ಕೊರೊನಾ ಕರಿಛಾಯೆ: ಬೇರೆಯವರಿಗೆ ಬೆಳಕಾಗಬೇಕಿದ್ದ ಕಣ್ಣುಗಳು ಮಣ್ಣು ಪಾಲು - Covid Disruption to the Eye Donation in Hubli
ಸ್ವಾಭಾವಿಕವಾಗಿ ಕಾಯಿಲೆಯಿಂದ ಅಥವಾ ಅಪಘಾತದಿಂದ ಮೃತರಾದರೂ ಅವರಲ್ಲಿ ಕೊರೊನಾ ಸೋಂಕು ಇರಬಹುದೆಂಬ ಆತಂಕ ಕಾಡುತ್ತಿದೆ. ಮೃತಪಟ್ಟ ನಂತರ ಕೆಲವರ ಸ್ಯಾಂಪಲ್ಸ್ ವರದಿ ಪಾಸಿಟಿವ್ ಬರುತ್ತಿದೆ. ನೇತ್ರದಾನಕ್ಕೆ ನೋಂದಾಯಿತರು ಸ್ವಾಭಾವಿಕವಾಗಿ ಮೃತರಾದರೂ ಅವರಿಂದ ಕಣ್ಣುಗಳನ್ನು ಪಡೆಯಲಾಗುತ್ತಿಲ್ಲ.
ನೇತ್ರದಾನದ ಮೇಲೂ ಕೊರೊನಾ ಕರಿಛಾಯೆ
ವಾಣಿಜ್ಯ ನಗರಿಯ ಎಂ ಎಂ ಜೋಶಿ ನೇತ್ರ ವಿಜ್ಞಾನ ಸಂಸ್ಥೆಯಲ್ಲಿ ಪ್ರತಿ ತಿಂಗಳು 30ಕ್ಕೂ ಹೆಚ್ಚು ಜನರ ನೇತ್ರ ಸಂಗ್ರಹ ಮಾಡಲಾಗುತ್ತಿತ್ತು. ಆದರೆ, ಕೊರೊನಾ ಕರಿ ಛಾಯೆ ಆವರಿಸಿಕೊಂಡ ಹಿನ್ನೆಲೆ ಕಳೆದ ಮೂರು ತಿಂಗಳಿಂದ ನೇತ್ರ ಸಂಗ್ರಹದಲ್ಲಿ ಗಣನೀಯವಾದ ಇಳಿಕೆಯಾಗಿದ್ದು, ನೇತ್ರದಾನದ ನೋಂದಣಿ ಮಾಡಿದವರ ಕಣ್ಣುಗಳು ಮರಣಾನಂತರ ಜಗತ್ತನ್ನು ನೋಡುವ ಬದಲು ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿವೆ.
ಮೃತಪಟ್ಟ ನಂತರ ಕೆಲವರ ಗಂಟಲು ದ್ರವದ ಮಾದರಿಯ ಪರೀಕ್ಷಾ ವರದಿ ಪಾಸಿಟಿವ್ ಎಂದು ಬರುತ್ತಿದೆ. ನೋಂದಾಯಿತರು ಸ್ವಾಭಾವಿಕವಾಗಿ ಮೃತರಾದರೂ ಅವರಿಂದ ಕಣ್ಣುಗಳನ್ನು ಪಡೆಯಲಾಗುತ್ತಿಲ್ಲ. ಅಲ್ಲದೇ, ಮೃತ ವ್ಯಕ್ತಿಯ ಕೋವಿಡ್ ಪರೀಕ್ಷಾ ವರದಿ 24 ಗಂಟೆಗಳ ನಂತರ ಬರುವುದರಿಂದ ನೇತ್ರ ಪಡೆಯುವುದು ಸಾಧ್ಯವಾಗುತ್ತಿಲ್ಲ.
2019 ರಲ್ಲಿ ನೇತ್ರದಾನಿಗಳಿಂದ 330 ನೇತ್ರಗಳನ್ನು ಸಂಗ್ರಹಿಸಲಾಗಿತ್ತು. ಪ್ರಸ್ತುತ ವರ್ಷ ಕೋವಿಡ್ -19 ಸೋಂಕು ಹರಡುವ ಪೂರ್ವದ ಮೂರು ತಿಂಗಳು 30 ಜನರಿಂದ ನೇತ್ರದಾನ ಪಡೆಯಲಾಗಿತ್ತು. ನಂತರದ ಮೂರು ತಿಂಗಳ ಅವಧಿಯಲ್ಲಿ ಕೇವಲ 9 ಮಾತ್ರ ಸಂಗ್ರಹಿಸಲಾಗಿದೆ. ಹೀಗಾಗಿ ಬೇರೆಯವರ ಬಾಳು ಬೆಳಗಬೇಕಿದ್ದ ಕಣ್ಣುಗಳು ಮಣ್ಣಾಗುತ್ತಿರುವುದಕ್ಕೆ ವೈದ್ಯರು ಬೇಸರ ವ್ಯಕ್ತಪಡಿಸಿದ್ದಾರೆ.