ಧಾರವಾಡ:ವಿಶ್ವ ಆರೋಗ್ಯ ಸಂಸ್ಥೆ, ಯುಎನ್‍ಡಿಪಿ ಮತ್ತಿತರ ಜಾಗತಿಕ ಮಟ್ಟದ ಸಂಸ್ಥೆಗಳು ಪ್ರಪಂಚದಾದ್ಯಂತ ಎಲ್ಲ ರಾಷ್ಟ್ರಗಳಲ್ಲಿ ಕೋವಿಡ್ ವಿರುದ್ಧ ಹೋರಾಡುತ್ತಿರುವ ಸರ್ಕಾರಿ, ಖಾಸಗಿ ವೈದ್ಯರೂ ಸೇರಿದಂತೆ ಎಲ್ಲ ಆರೋಗ್ಯ ಕಾರ್ಯಕರ್ತರ ದತ್ತಾಂಶ ಮಾಹಿತಿಯನ್ನು ಸಂಗ್ರಹಿಸುತ್ತಿವೆ.ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿರುವ ವೈದ್ಯರು, ಅರೆವೈದ್ಯಕೀಯ ಹಾಗೂ ಎಲ್ಲಾ ಸಹಾಯಕ ಸಿಬ್ಬಂದಿಗಳ ವಿವರಗಳನ್ನು ನಿಗದಿತ ನಮೂನೆಯಲ್ಲಿ ನವೆಂಬರ್ 4 ರೊಳಗೆ ಒದಗಿಸಬೇಕು. ಮಾಹಿತಿ ನೀಡಿದ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಹಂತದಲ್ಲಿ ಕೋವಿಡ್-19 ರ ಲಸಿಕೆ ಪೂರೈಸಲು ವಿಶ್ವಸಂಸ್ಥೆ ಹಾಗೂ ಭಾರತ ಸರ್ಕಾರದ ನೀತಿ ಆಯೋಗ ಯೋಜಿಸಿದೆ. ಹಾಗಾಗಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳು ತಮ್ಮ ವೈದ್ಯರು, ಸಿಬ್ಬಂದಿ ವಿವರ ಒದಗಿಸಬೇಕು ಎಂದು ಜಿಲ್ಲಾಧಿಕಾರಿ ನಿತೇಶ್ ಕೆ. ಪಾಟೀಲ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಆರೋಗ್ಯ ಕಾರ್ಯಕರ್ತರ ಮಾಹಿತಿ ಸಂಗ್ರಹಣೆ ದತ್ತಾಂಶ ಸೃಜನೆ ಮಾರ್ಗದರ್ಶಿ ಸೂತ್ರಗಳ ಕುರಿತು ಖಾಸಗಿ ಆಸ್ಪತ್ರೆಗಳ ಆಡಳಿತಾಧಿಕಾರಿಗಳಿಗೆ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು.
ಜಗತ್ತಿನ ಯಾವುದೇ ರಾಷ್ಟ್ರ ಕೋವಿಡ್-19 ಕ್ಕೆ ಲಸಿಕೆ ಕಂಡು ಹಿಡಿದರೂ ಸಹ ಎಲ್ಲ ದೇಶಗಳ ಆರೋಗ್ಯ ಕಾರ್ಯಕರ್ತರಿಗೆ ಅದನ್ನು ಪ್ರಥಮ ಆದ್ಯತೆಯಲ್ಲಿ ಪೂರೈಸಲು ವಿಶ್ವ ಆರೋಗ್ಯ ಸಂಸ್ಥೆ ನಿರ್ಧರಿಸಿದೆ. ಇದಕ್ಕಾಗಿ ಎಲ್ಲ ದೇಶಗಳ ಆರೋಗ್ಯ ಕಾರ್ಯಕರ್ತರ ದತ್ತಾಂಶ ಸಂಗ್ರಹ ನಡೆಯುತ್ತಿದೆ. ನಮ್ಮ ದೇಶ, ರಾಜ್ಯ ಹಾಗೂ ಜಿಲ್ಲೆಗೆ ಅಗತ್ಯಕ್ಕನುಗುಣವಾಗಿ ಲಸಿಕೆ ಸಿಗಬೇಕಾದರೆ ಈ ಹಂತದಲ್ಲಿ ಸಮರ್ಪಕವಾಗಿ ಮಾಹಿತಿ ದಾಖಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಎಸ್.ಎಂ. ಹೊನಕೇರಿ ಮಾತನಾಡಿ, ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್ ಅವರ ಅಧ್ಯಕ್ಷತೆಯಲ್ಲಿ ನ್ಯಾಷನಲ್ ಎಕ್ಸ್ಪರ್ಟ್ ಗ್ರೂಪ್ ಆನ್ ವ್ಯಾಕ್ಸಿನ್ ಅಡ್ಮಿನ್‍ಸ್ಟ್ರೇಷನ್ ಫಾರ್ ಕೋವಿಡ್-19 (ಓಇಉಗಿಂಅ) ರಚಿಸಲಾಗಿದೆ. ಈ ಸಮಿತಿಯು ಲಸಿಕೆ ಪೂರೈಸಬೇಕಾದ ಜನರ ಆದ್ಯತಾ ವಲಯಗಳನ್ನು ಗುರುತಿಸಲಿದೆ. ಕೋವಿಡ್ ವಿರುದ್ಧ ಮುಂಚೂಣಿ ಸಾಲಿನಲ್ಲಿ ಹೋರಾಡುತ್ತಿರುವ ನರ್ಸ್, ಆಶಾ, ಸೂಪರ್‌ವೈಸರ್‌ಗಳು ಆಯುಷ್, ಅಲೋಪತಿ, ದಂತ ಮತ್ತಿತರ ವೈದ್ಯರು, ಲ್ಯಾಬ್, ಶಸ್ತ್ರಚಿಕಿತ್ಸಾ ತಂತ್ರಜ್ಞರು, ಫಾರ್ಮಾಸಿಸ್ಟ್, ಫಿಸಿಯೋಥೆರಪಿಸ್ಟ್, ನರ್ಸಿಂಗ್ ಸಹಾಯಕರು, ವಾರ್ಡ್ ಬಾಯ್ಸ್, ಚಾಲಕರು, ಭದ್ರತಾ ಸಿಬ್ಬಂದಿ, ಸ್ವಚ್ಛತೆಗಾರರು, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ವೈದ್ಯಕೀಯ ಹಾಗೂ ಅರೆವೈದ್ಯಕೀಯ ವಿದ್ಯಾರ್ಥಿಗಳ ಮಾಹಿತಿಯನ್ನು ಸಂಬಂಧಿಸಿದ ಆಸ್ಪತ್ರೆಗಳು ಒದಗಿಸಬೇಕು.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಎಲ್ಲ 3,855 ವೈದ್ಯರು, ಸಿಬ್ಬಂದಿ ವರ್ಗ ತಮ್ಮ ಮಾಹಿತಿ ದಾಖಲಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳು ಶೇ.100 ರಷ್ಟು ಮಾಹಿತಿ ನೀಡಿವೆ. ಜಿಲ್ಲೆಯಲ್ಲಿ 1,316 ಖಾಸಗಿ ಆಸ್ಪತ್ರೆಗಳಿದ್ದು, ಇದುವರೆಗೆ 433 ಆಸ್ಪತ್ರೆಗಳು ಮಾಹಿತಿ ಪೂರೈಸಿವೆ. ಶೇ.33 ರಷ್ಟು ಮಾಹಿತಿ ಮಾತ್ರ ಸಂಗ್ರಹವಾಗಿದೆ. ಕೂಡಲೇ ಖಾಸಗಿ ಆಸ್ಪತ್ರೆಗಳು ತಮ್ಮ ವೈದ್ಯರು, ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ಮಾಹಿತಿ ಒದಗಿಸಬೇಕು ಎಂದು ಸೂಚಿಸಿದರು.
ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಡಾ.ಸಿದ್ದಲಿಂಗಯ್ಯ ಮಾತನಾಡಿ, ದತ್ತಾಂಶ ಒದಗಿಸುವ ವಿಧಾನಗಳನ್ನು ಹಂತ ಹಂತವಾಗಿ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಆರೋಗ್ಯ ಕಾರ್ಯಕರ್ತರ ದತ್ತಾಂಶ ಒದಗಿಸಲು ಸಹಾಯಕ್ಕಾಗಿ ಮಂಜುನಾಥ-9535663384 ಅಥವಾ ಸತೀಶ-9448693023 ಮೊಬೈಲ್ ಸಂಖ್ಯೆ ಸಂಪರ್ಕಿಸಬಹುದು ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದೀನಕರ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ: ಶಿವಕುಮಾರ್ ಮಾನಕರ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು.